ನೇಮಕಾತಿ ನೆಪದಲ್ಲಿ ಕೆಲವರಿಂದ ಹಣ ಸುಲಿಗೆ ಯತ್ನ: ಆರೋಪ

Published on

ಮೈಸೂರು: ನಗರಪಾಲಿಕೆಯಲ್ಲಿ ಖಾಲಿ ಇರುವ 252 ಪೌರ ಕಾರ್ಮಿಕರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದನ್ನೇ ನೆಪವಾಗಿರಿಸಿಕೊಂಡು ಕೆಲವರು ಹಣ ಸುಲಿಗೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರ ಕಾರ್ಮಿಕರ ಮಹಾಸಂಘದ ಅಧ್ಯಕ್ಷ ನಾರಾಯಣ ದೂರಿದರು.
ಹಿರಿತನದ ಆಧಾರದ ಮೇಲೆ ನೇಮಕಾತಿ ನಡೆಯಲಿದೆ. ಇದೇ ವೇಳೆ ಅಧಿಕಾರಿ ವರ್ಗ ಸಹ ಪಾರದರ್ಶಕ, ನಿಯಮಾನುಸಾರವಾಗಿ, ಭ್ರಷ್ಟಾಚಾರ ರಹಿತವಾಗಿ ನೇಮಕಾತಿ ನಡೆಸಬೇಕು. ಬಡ ಪೌರಕಾರ್ಮಿಕರು ಯಾವುದೇ ಅಮಿಷಕ್ಕೆ ಬಲಿಯಾಗಬಾರದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಹಾಗೂ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವ ಅನ್ವಯ ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರನ್ನು ಏಕಕಾಲದಲ್ಲಿ ಕಾಯಂಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ಸಂಬಂಧ ಹಣಕಾಸು ಇಲಾಖೆಗೂ ಕಡತ ರವಾನೆಯಾಗಿದೆ. ಹೀಗಾಗಿ ನಗರ ಹಾಗೂ ರಾಜ್ಯದಲ್ಲಿನ ಎಲ್ಲ ಪೌರಕಾರ್ಮಿಕರು ಆತಂಕ, ಸುಳ್ಳು ವದಂತಿಗಳಿಗೆ ಬಲಿಯಾಗಬಾರದು ಎಂದು ಅವರು ಕೋರಿದರು. ಮುಖಂಡರಾದ ಆರ್ಟಿಸ್ಟ್ ನಾಗರಾಜು, ಆರ್.ದಾಸು, ಆರ್.ಶಿವಣ್ಣ, ಆರ್.ಲಕ್ಷ್ಮಣ್, ಯತಿರಾಜ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net