

ಮೈಸೂರು: ನಗರದ ರಿಂಗ್ ರಸ್ತೆಯಲ್ಲಿ ಚುನಾವಣೆ ಹಿನ್ನಲೆ ವಾಹನ ತಪಾಸಣೆ ನಡೆಸುವ ಸೋಗಿನಲ್ಲಿ ಮೂವರು ಯುವಕರು ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳನ್ನೇ ಯಾಮಾರಿಸಿ ಹಣ ಸುಲಿಯಲು ಯತ್ನಿಸಿದ್ದಾರೆ.
ಈ ಸಂಬಂಧ ಓರ್ವ ಸಿಕ್ಕಿಬಿದ್ದಿದ್ದು ಮತ್ತಿಬ್ಬರು ಯುವಕರು ಪರಾರಿಯಾಗಿದ್ದು, ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.
ಏನಿದು ಪ್ರಕರಣ: ಗುರುವಾರ ಮಧ್ಯ ರಾತ್ರಿ ಫ್ಲೈಯಿಂಗ್ ಸ್ಕ್ವಾಡ್ ತಂಡದ ಕಾರ್ಯಪ್ಪ, ಮಹದೇವ್, ಚಾಲಕ ಲಿಖಿನ್ ಹಾಗೂ ಮೇಟಗಳ್ಳಿ ಠಾಣೆಯ ಪೇದೆ ಶಶಿಕುಮಾರ್ ಕರ್ತವ್ಯದಲ್ಲಿದ್ದು, ಕಾರಿನಲ್ಲಿ ಸಾತಗಳ್ಳಿ ಬಸ್ ಡಿಪೋ ಕಡೆಯಿಂದ ದೇವೇಗೌಡ ಸರ್ಕಲ್‌ನತ್ತ ಹೋಗುತ್ತಿದ್ದರು. ಈ ವೇಳೆ ಮೂವರು ಯುವಕರು ಬೈಕ್ ಅಡ್ಡ ನಿಲ್ಲಿಸಿ ಚುನಾವಣೆ ಹಿನ್ನಲೆ ಪೊಲೀಸರ ಅಣತಿಯಂತೆ ವಾಹನಗಳನ್ನು ತಪಾಸಣೆ ಮಾಡುತ್ತಿದ್ದೇವೆ ಹಣ ಇದ್ದರೆ ಕೊಟ್ಟು ಬಿಡಿ ಎಂದು ಧಮ್ಕಿ ಹಾಕಿದ್ದಾರೆ. ಹಣ ಕೊಡದಿದ್ದಲ್ಲಿ ಜೀವಸಹಿತ ಮುಂದೆ ಹೋಗಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಈ ವೇಳೆ ಬ್ಯಾಕ್ ಸೀಟ್‌ನಲ್ಲಿ ಕುಳಿತಿದ್ದ ಪೇದೆ ಶಶಿಕುಮಾರ್ ಇಳಿದು ಬಂದು ಯಾವ ಠಾಣೆ ಪೊಲೀಸರು ಕಳಿಸಿದ್ದಾರೆ ಎಂದು ಪ್ರಶ್ನಿಸಿದಾಗ ಓಡಿಹೋಗಲು ಯತ್ನಿಸಿದ್ದಾರೆ. ಈ ವೇಳೆ ಮಾದೇಗೌಡ ಸಿಕ್ಕಿಬಿದ್ದಿದ್ದಾನೆ. ಮತ್ತಿಬ್ಬರು ಪರಾರಿಯಾಗಿದ್ದಾರೆ. ವಶಕ್ಕೆ ಪಡೆದ ಆರೋಪಿಯನ್ನು ಆಲನಹಳ್ಳಿ ಠಾಣೆ ಪೊಲೀಸರ ವಶಕ್ಕೆ ನೀಡಿ ಪ್ರಕರಣ ದಾಖಲಿಸಲಾಗಿದೆ.