ತಲಘಟ್ಟಪುರದಲ್ಲಿ ಸರ್ಕಾರಿ ಜಮೀನು ಪರಭಾರೆಗೆ ಯತ್ನ

talagattapur land
Published on

ಬೆಂಗಳೂರು: ಬೆಂಗಳೂರು ದಕ್ಷಿಣ ತಾಲೂಕಿನ ಉತ್ತರಹಳ್ಳಿ ಹೋಬಳಿಯ ತಲಘಟ್ಟಪುರ ಗ್ರಾಮಕ್ಕೆ ಸೇರಿರುವ 11.16 ಎಕರೆ ವಿಸ್ತೀರ್ಣದ ಸರ್ಕಾರಿ ಬಂಡೆ ಜಾಗವನ್ನು ಖಾಸಗಿ ವ್ಯಕ್ತಿಗೆ ಪರಭಾರೆ ಮಾಡಿಕೊಡಲು ಅಧಿಕಾರಿ/ಸಿಬ್ಬಂದಿಯೇ ಯತ್ನಿಸಿದ್ದು, ಈ ಕಡತವನ್ನು ಸುಪರ್ದಿಗೆ ಪಡೆದು ಜಮೀನು ಉಳಿಸುವಂತೆ ಕೋರಿ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಅವರು ನಗರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಈಗಾಗಲೇ ಬೆಂಗಳೂರು ದಕ್ಷಿಣ ತಾಲೂಕಿನ ಉತ್ತರಹಳ್ಳಿ ಹೋಬಳಿ, ಕೆಂಗೇರಿ ಹೋಬಳಿ ಮತ್ತು ಯಶವಂತಪುರ ಹೋಬಳಿಗಳ ವ್ಯಾಪ್ತಿಯಲ್ಲಿ ಹಲವು ಸರ್ಕಾರಿ ಸ್ವತ್ತುಗಳನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಲಾಗಿದೆ. ಇವುಗಳ ಸಾಲಿಗೆ ತಲಘಟ್ಟಪುರದ ಸರ್ಕಾರಿ ಬಂಡೆ ಜಾಗವು 500 ಕೋಟಿ ರೂ. ಮೌಲ್ಯದ್ದಾಗಿದೆ. ಈ ಜಮೀನನ್ನು ಖಾಸಗಿ ವ್ಯಕ್ತಿಗಳ ಹಣದ ಪ್ರಭಾವಕ್ಕೆ ಒಳಗಾಗಿ ದಕ್ಷಿಣ ತಾಲ್ಲೂಕಿನ ತಹಸೀಲ್ದಾರ್ ಕಚೇರಿಯ ಅಧಿಕಾರಿಗಳು ಟಿಪ್ಪಣಿ ತಯಾರಿಸಿ ಅನುಮೋದನೆ ಕೋರಿ ನಗರ ಜಿಲ್ಲೆಯ ಸಹಾಯಕ ಆಯುಕ್ತರಿಗೆ ತಲುಪಿಸಿದ್ದಾರೆ. ಸಂಬಂಧಿಸಿದ ಕಡತವವನ್ನು ತರಿಸಿಕೊಂಡು ಸರ್ಕಾರಿ ಜಮೀನನ್ನು ಉಳಿಸಬೇಕು ಎಂದು ರಮೇಶ್ ನಗರ ಡಿಸಿಯನ್ನು ಆಗ್ರಹಿಸಿದ್ದಾರೆ.

ಸರ್ಕಾರಿ ಸ್ವತ್ತು ಖಾಸಗಿ ವ್ಯಕ್ತಿಗೆ ಪರಭಾರೆ ಮಾಡಲು ಕಾನೂನುಬಾಹಿರವಾಗಿ ಟಿಪ್ಪಣಿ ಹಾಳೆಗಳನ್ನು ತಯಾರಿಸಿರುವ ದಕ್ಷಿಣ ತಾಲ್ಲೂಕಿನ ತಹಸೀಲ್ದಾರ್ ಕಚೇರಿಯಲ್ಲಿರುವ ಅಧಿಕಾರಿ/ನೌಕರರ ವಿರುದ್ಧವೂ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net