

ಶಿವಮೊಗ್ಗ: ಹಿಂದುಳಿದ ವರ್ಗಗಳ ಜಾತಿಗಣತಿ ಹೆಸರಲ್ಲಿ ರಾಜ್ಯ ಸರ್ಕಾರವು ಕ್ರೈಸ್ತ ಉಪ್ಪಾರ, ಕ್ರೈಸ್ತ ಭೋವಿ ಎನ್ನುವ ಕಾಲಂ ಸೃಷ್ಟಿಸಿ ಜಾತಿಗಳನ್ನು ಒಡೆಯುವ ಹುನ್ನಾರ ನಡೆಸಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ಹಿಂದು ವಿರೋಧಿಯಾಗಿದೆ. ಅಲ್ಪಸಂಖ್ಯಾತರ ತುಷ್ಟೀಕರಣದ ರಾಜಕಾರಣ ಮಿತಿ ಮೀರಿದೆ. ಈಗ ಜಾತಿಗಳನ್ನು ಒಡೆಯುವ ಕೆಲಸಕ್ಕೆ ಕೈಹಾಕಿರುವುದು ದೌರ್ಭಾಗ್ಯ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಭದ್ರಾವತಿ, ತರೀಕೆರೆಯಲ್ಲಿ ಪಾಕಿಸ್ತಾನ ಪರ ಘೋಷಣೆ, ಮದ್ದೂರು, ಸಾಗರದಲ್ಲಿ ಗಣೇಶ ಮೆರವಣಿಗೆ ವೇಳೆ ನಡೆದ ಘಟನೆಗಳು ಖಂಡನೀಯ. ಈ ದೇಶದ ಅನ್ನ, ನೀರು ಬಳಸಿಕೊಂಡು ದೇಶದ ವಿರುದ್ಧವೇ ಘೋಷಣೆ ಕೂಗುವ ಮನಸ್ಥಿತಿಯ ಜನರ ಬಗ್ಗೆ ಏನು ಹೇಳಲು ಸಾಧ್ಯ. ಪಾಕ್ ಪರ ಘೋಷಣೆ ಕೂಗಿದವರನ್ನು ಸರ್ಕಾರ ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.
ಮದ್ದೂರಿನ ಘಟನೆ ಕುರಿತ ಹೇಳಿಕೆ ನೀಡಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ವಿರುದ್ಧ ಎಫ್‌ಐಆರ್ ದಾಖಲಾದ ಕುರಿತು ಪ್ರತಿಕ್ರಿಯಿಸಿದ ಬಿವೈಆರ್, ಈ ಸರ್ಕಾರ ಹಿಂದು ವಿರೋಧಿ ಎನ್ನುವುದಕ್ಕೆ ಇದೊಂದು ನಿದರ್ಶನ. ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾದ ಸರ್ಕಾರ, ಘಟನೆ ಖಂಡಿಸಿ ಪ್ರತಿಭಟನೆ ಮಾಡಿದವರ ಮೇಲೆ ಲಾಠಿ ಚಾರ್ಜ್ ಮಾಡಿಸುತ್ತದೆ. ಹೇಳಿಕೆ ನೀಡಿದ ಹಿಂದುಪರ ನಾಯಕರ ಮೇಲೆ ಎಫ್‌ಐಆರ್ ದಾಖಲಾಗುತ್ತದೆ ಎಂದು ಕಿಡಿಕಾರಿದರು.
ಕೇಂದ್ರದಲ್ಲಿ ವಿಪಕ್ಷಗಳಿಗೆ ಕೆಲಸವಿಲ್ಲ, ಜನಪರ ಆಡಳಿತವೇ ಅವರಿಗೆ ಬೇಕಾಗಿಲ್ಲ. ಮತಗಳ್ಳತನದ ಆರೋಪದ ಮೂಲಕ ಚುನಾವಣಾ ಆಯೋಗವನ್ನು ದೂಷಿಸಿ ಪ್ರಜಾಪ್ರಭುತ್ವಕ್ಕೆ ಅಪಚಾರ ಮಾಡಲಾಗುತ್ತಿದೆ. ಆಡಳಿತ ವ್ಯವಸ್ಥೆಯನ್ನೇ ಅಸ್ಥಿರಗೊಳಿಸುವ ಹುನ್ನಾರ ನಡೆಸಿದೆ ಎಂದು ದೂರಿದರು.
ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರಿಗೆ ಆಹ್ವಾನ ನೀಡಿದ್ದರ ಬಗ್ಗೆ ಪ್ರತಿಕ್ರಿಯಿಸಿದ ರಾಘವೇಂದ್ರ, ಬಾನು ಮುಷ್ತಾಕ್ ಅವರ ಬಗ್ಗೆ ನನಗೆ ಗೌರವವಿದೆ. ಆದರೆ ತಾಯಿ ಭುವನೇಶ್ವರಿ ಬಗ್ಗೆ ಕೆಟ್ಟದಾಗಿ ಮಾತನಾಡಿದ ಅವರು ನಾಡಹಬ್ಬ ದಸರಾ ಉದ್ಘಾಟನೆ ಮಾಡಬಾರದು. ಕನ್ನಡಪರ ಹೋರಾಟಗಾರರು ಇದನ್ನು ಪ್ರಶ್ನಿಸಬೇಕು ಎಂದರು.