ಎಡ, ಬಲಗೈ ನಡುವೆ ಒಡಕು ತರಲು ಯತ್ನ: ಆರೋಪ

Published on

ಮೈಸೂರು:  ಒಳ ಮೀಸಲಾತಿ ಸಂಬಂಧ ಎಡ ಹಾಗೂ ಬಲಗೈ ಸಮುದಾಯದ ನಡುವೆ ಒಡಕು ಮೂಡಿಸುವ ಪ್ರಯತ್ನ ನಡೆಯುತ್ತಿದ್ದು, ಇಂತಹ ಹೇಳಿಕೆಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ವಕೀಲರ ಕ್ಷೇಮಾಭಿವೃದ್ಧಿ ಸಂಘವು ಖಂಡಿಸಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ತಿಮ್ಮಯ್ಯ ಹೇಳಿದರು.

ಒಳಮೀಸಲಾತಿ ಕುರಿತ ನ್ಯಾ.ನಾಗಮೋಹನ ದಾಸ್ ವರದಿ ಪರಿಷ್ಕರಿಸಿ ಎಡಗೈ ಮತ್ತು ಬಲಗೈ ಸಮುದಾಯಕ್ಕೆ ಸರ್ಕಾರ ಸಮಾನವಾಗಿ ಮೀಸಲಾತಿ ಹಂಚಿರುವುದನ್ನು ಸ್ವಾಗತಿಸುತ್ತೇವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕರ್ನಾಟಕ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆ ಅಧ್ಯಕ್ಷ ಅರುಣ್ ಕುಮಾರ್ ಅವರು ಇತ್ತೀಚೆಗೆ ದುಂಡುಮೇಜಿನ ಸಭೆ ಆಯೋಜಿಸಿ ಪರಿಶಿಷ್ಟ ಜಾತಿಯದವರು ಸರ್ಕಾರದ ಮೇಲೆ ಒತ್ತಡ ಹೇರಿ ಶೇ.6 ಮೀಸಲಾತಿ ಪಡೆದಿದ್ದಾರೆ. ಇದು ಅಕ್ರಮವಾಗಿದ್ದು ತಾಕತ್ತಿದ್ದರೆ ನ್ಯಾಯಾಲಯಕ್ಕೆ ಹೋಗಬೇಕಿತ್ತು ಎಂದು ಹೇಳಿಕೆ ನೀಡಿರುವುದು ಸಹೋದರಂತೆ ಇರುವ ಎಡ-ಬಲ ಸಮುದಾಯದಲ್ಲಿ ಭಿನ್ನಾಭಿಪ್ರಾಯ ಮೂಡಿಸಿ ದ್ವೇಷಕ್ಕೆ ಕಾರಣವಾಗುತ್ತವೆ ಎಂದು ಟೀಕಿಸಿದರು.

ಬಿಜೆಪಿಯಲ್ಲಿ ರಾಜಕೀಯ ಲಾಭ ಪಡೆಯಲು ಅವರು ಇಂಥ ಹೇಳಿಕೆ ನೀಡುತ್ತಿದ್ದಾರೆ. ಎರಡು ಸಮುದಾಯದ ಸಚಿವರು ವರದಿಗೆ ಸಮ್ಮತಿ ಸೂಚಿಸಿದ್ದಾರೆ. ಒಂದುವೇಳೆ ವರದಿಯು ಅವೈಜ್ಞಾನಿಕವಾಗಿದೆ ಎನ್ನುವುದನ್ನು ಇಬ್ಬರೂ ಸೇರಿ ವಿರೋಧಿಸಬೇಕು. ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಪಡೆಯಲು ಪ್ರಯತ್ನಿಸಬೇಕು. ಅದನ್ನು ಬಿಟ್ಟು ಅಣ್ಣ ತಮ್ಮಂದಿರಂತೆ ಇರಬೇಕಾದ ಸಮುದಾಯದ ನಡುವೆ ಬಿರುಕು ಮೂಡಿಸಬಾರದು ಎಂದು ಕೋರಿದರು.

ಸಂಘದ ಉಪಾಧ್ಯಕ್ಷ ಪುಟ್ಟಸ್ವಾಮಿ, ಚಂದ್ರಶೇಖರ, ಪದಾಧಿಕಾರಿಗಳಾದ ಉಮೇಶ್, ವಿಷ್ಣುವರ್ಧನ, ಸೋಮರಾಜ, ಶಿವಮೂರ್ತಿ, ಶ್ರೀನಿವಾಸ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net