ದಲಿತ ಸಮುದಾಯವನ್ನು ವಂಚಿಸುವ ಹುನ್ನಾರ : ಡಿಎಸ್‌ಎಸ್ ಚೋರನಹಳ್ಳಿ ಶಿವಣ್ಣ ಆರೋಪ

mysore
Published on

ಮೈಸೂರು: ಸಮಾಜ ಕಲ್ಯಾಣ ಇಲಾಖೆಯು ವಿವಿಧ ಯೋಜನೆ ಅನುಷ್ಠಾನಗೊಳಿಸುವಲ್ಲಿ ದಲಿತ ಸಮುದಾಯವನ್ನು ವಂಚಿಸುವ ಹುನ್ನಾರ ನಡೆಸಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಶಾಖೆ ಸಂಚಾಲಕ ಚೋರನಹಳ್ಳಿ ಶಿವಣ್ಣ ದೂರಿದರು.


ಪ್ರಬುದ್ಧ ಯೋಜನೆಯನ್ನು 2021ರಲ್ಲಿ ಜಾರಿಗೊಳಿಸಲಾಗಿತ್ತು. ಇದರ ಮೂಲಕ ವಿದೇಶಗಳಲ್ಲಿ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾಭ್ಯಾಸಕ್ಕೆ ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೆ ಧನಸಹಾಯ ದೊರೆಯುತ್ತಿತ್ತು. ಆದರೆ, ರಾಜ್ಯ ಸರ್ಕಾರ ಇದನ್ನು ಸಹಿಸದೆ ಈ ಯೋಜನೆಯನ್ನು ಮೊಟಕುಗೊಳಿಸಿದ್ದು, ಸಂಶೋಧನಾ ವಿದ್ಯಾಭ್ಯಾಸದ ಧನಸಹಾಯವನ್ನೇ ಸ್ಥಗಿತಗೊಳಿಸಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.


ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಉತ್ತೇಜಿಸುವ ನಿಟ್ಟಿನಲ್ಲಿ ಮೆಟ್ರಿಕ್ ನಂತರದ ಪರೀಕ್ಷೆಗಳಲ್ಲಿ ಮೊದಲ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಶೇ.60ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ಕೊಡುತ್ತಿದ್ದ ಪ್ರೋತ್ಸಾಹ ಧನಕ್ಕೆ ಆದಾಯ ಮಿತಿ ಹೇರಲಾಗಿದೆ ಎಂದು ಹರಿಹಾಯ್ದರು.


ರಾಜ್ಯ ಸರ್ಕಾರವು ಎಸ್‌ಸಿಪಿ, ಟಿಎಸ್‌ಪಿ ಯೋಜನೆಯನ್ನು ಕಾರ್ಯಗತಗೊಳಿಸುವಾಗ ಉದ್ದೇಶಪೂರ್ವಕವಾಗಿ ಹೊಸ ಅಂಶವನ್ನು (7ಡಿ, 7ಸಿ) ಸೇರ್ಪಡೆ ಮಾಡಿ ಕಾಯ್ದೆಯನ್ನು ಉಲ್ಲಂಘಿಸಿದೆ. ಜತೆಗೆ ರಾಜಾರೋಷವಾಗಿ ಗ್ಯಾರಂಟಿ ಯೋಜನೆಗಳಿಗೆ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯ ಹಣ ವಿನಿಯೋಗಿಸುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಸಂಘಟನೆಯ ಮುಖಂಡರಾದ ಕಂದೇಗಾಲ ಶಿವಣ್ಣ, ಹರದನಹಳ್ಳಿ ರಾಜೇಶ್, ಬೊಕ್ಕಳ್ಳಿ ಮಹದೇವಸ್ವಾಮಿ, ಆರ್.ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net