ಖೊಟ್ಟಿ ದಾಖಲೆ ಸೃಷ್ಠಿಸಿ ವಂಚನೆಗೆ ಯತ್ನ, ಸಿಕ್ಕಿ ಬಿದ್ದ ವಂಚಕರು, ಅಧಿಕಾರಿ ಅಲರ್ಟ್-ಆರೋಪಿಗಳು ಅರೆಸ್ಟ್ !

VIJAYPUR SUB RAJISTRAR OFFICE
ವಿಜಯಪುರ ನಗರದ ಉಪ ನೋಂದಣಿ ಇಲಾಖೆ.
Published on

ವಿಜಯಪುರ: ಖೊಟ್ಟಿ ದಾಖಲೆ ಸೃಷ್ಠಿಸಿ ಆಸ್ತಿ ಕಬಳಿಸುತ್ತಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಉಪ ನೋಂದಣಿ ಇಲಾಖೆ ಮೈಯೆಲ್ಲಾ ಕಣ್ಣಾಗಿ ಕೆಲಸ ಮಾಡುತ್ತಿದ್ದು, ಪರಿಣಾಮ ನಕಲಿ ದಾಖಲೆ ಬಳಸಿ ಆಸ್ತಿ ಕಬಳಿಸಲು ಸಂಚು ರೂಪಿಸಿದವರನ್ನು ಹಿಡಿದು ಪೊಲೀಸರ ಸುಪರ್ದಿಗೊಪ್ಪಿಸಿದ್ದಾರೆ.

ಇಲ್ಲಿನ ಸೋಲಾಪುರ ರಸ್ತೆಯಲ್ಲಿರುವ ಉಪ ನೋಂದಣಿ ಇಲಾಖೆಯಲ್ಲಿ ಬುಧವಾರ ಸಂಜೆ ಖೊಟ್ಟಿ ದಾಖಲೆ ಬಳಸಿ ಸಾರ್ವಜನಿಕರೊಬ್ಬರ ಆಸ್ತಿ ಕಬಳಿಸಲು ಯತ್ನಿಸುತ್ತಿದ್ದಾಗ ಸಿಬ್ಬಂದಿಯ ಜಾಗರೂಕತೆ ಮತ್ತು ಕರ್ತವ್ಯ ಪ್ರಜ್ಞೆಯಿಂದಾಗಿ ವಂಚನೆ ಬೆಳಕಿಗೆ ಬಂದಿದೆ. ಕೂಡಲೇ ಮೂಲ ಮಾಲೀಕರನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕಿದ್ದು, ಅವರ ಮೂಲಕವೇ ಪೊಲೀಸ್ ಠಾಣೆಗೆ ದೂರು ಸಲ್ಲಿಸುವಲ್ಲಿ ಸಫಲರಾಗಿದ್ದಾರೆ.

ಪ್ರಕರಣದ ವಿವರ?

ಬಿಎಲ್‌ಡಿಇ ರಸ್ತೆಯ ಸುಮತಿ ನಗರದ ಉದ್ಯಮಿ ಮನೀಷ್ ಮಾನಿಕಚಂದ್ ಪಾರೇಖ್ ಎಂಬುವರು ಮಹಾಲ್ ಬಾಗಾಯತ್ ರಿಸನಂ.727/ಕ, ಪ್ಲಾಟ್ ನಂ. 37ರಲ್ಲಿ 1453 ಚದರ ಅಡಿ ಜಮೀನು ಹೊಂದಿದ್ದಾರೆ. ಆರೋಪಿತ ಹಮೀದಾ ಹಾಜಿಸಾಬ ಹೊಂಚಾಳ ಹಾಗೂ ಆರೋಪಿತರು ಕೂಡಿಕೊಂಡು ಮಹಾನಗರ ಪಾಲಿಕೆ ನೀಡುವ ನಮೂನೆ ನಂ. 2(ನಿಯಮ 20) ಪಡೆದು ಪ್ಲಾಟ್‌ಗೆ ಸಂಬಂಧಿಸಿದ ಪಿಐಡಿ: 110868 ನಂಬರ್‌ನ ಖೊಟ್ಟಿ ದಾಖಲೆ ಸೃಷ್ಠಿಸಿ, ಜಮೀನು ಮಾರಾಟ ಮಾಡಲು ಹೊಂಚು ಹಾಕಿ, ಉಪ ನೋಂದಣಿ ಇಲಾಖೆಗೆ ತೆರಳಿದ್ದಾರೆ. ಅಲ್ಲಿ ಝರಾಕ್ಸ್ ಪ್ರತಿ ನೀಡಿದ್ದು, ಅದನ್ನಾಧರಿಸಿ ಉಪ ನೋಂದಣಾಧಿಕಾರಿ ಸಂಬಂಧಿಸಿದವರಿಗೆ ಕರೆ ಮಾಡಿ ಪರಿಶೀಲಿಸಲಾಗಿ ಇದೊಂದು ಖೊಟ್ಟಿ ದಾಖಲೆ ಎಂಬುದು ಗಮನಕ್ಕೆ ಬಂದಿದೆ.

ಮೂವರ ಬಂಧನ

ಮೂಲ ವಾರಸುದಾರರಾದ ಉದ್ಯಮಿ ಮನೀಷ್ ಮಾನಿಕಚಂದ್ ಪಾರೇಖ್ ಕೂಡಲೇ ಉಪ ನೋಂದಣಿ ಇಲಾಖೆಗೆ ಭೇಟಿ ನೀಡಿ ದಾಖಲೆ ಗಮನಿಸಿದ್ದು, ಖೊಟ್ಟಿ ಎಂಬುದು ಮನವರಿಕೆಯಾಗಿದೆ. ಆದರ್ಶ ನಗರ ಠಾಣೆಯಲ್ಲಿ ಸ್ಥಳೀಯ ನಿವಾಸಿ ಹಮೀದಾ ಹಾಜಿಸಾಬ್ ಹೊಂಚಾಳ ಇವರ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾವುಸಾಹೇಬ್ ಜಾಧವ್, ಖಾಜಾ ಅಮೀನ್ ಅತ್ತಾರ್ ಹಾಗೂ ರೆಹಮತುಲ್ಲಾ ಸಾತಾರಕರ ಇವರನ್ನು ಬಂಧಿಸಲಾಗಿದ್ದು, ಮಹಿಳೆಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಬಂಧಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಾಖಲೆ ಪರಿಶೀಲನೆ ಚುರುಕು

ಖೊಟ್ಟಿ ದಾಖಲೆ ಸೃಷ್ಠಿಸಿ ಆಸ್ತಿ ಕಬಳಿಸುವ ಪ್ರಕರಣಗಳಿಗೆ ಸಂಬಂಧಿಸಿದಂತೆ ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಉಪ ನೋಂದಣಾಧಿಕಾರಿ ಬಿ.ಎಸ್. ಬಿರಾದಾರ ಇವರು, ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ. ಯಾವುದೇ ದಾಖಲೆ ಇದ್ದರೂ ಅವುಗಳನ್ನು ಖಚಿತಪಡಿಸಿಕೊಳ್ಳಲು ಇವರು ಎಲ್ಲ ಅವಕಾಶಗಳನ್ನು ಬಳಸಿಕೊಳ್ಳಲಾಗುತ್ತಿದೆ. ಅಂತರ್ಜಾಲಗಳಲ್ಲಿ ಮೂಲ ದಾಖಲೆ ಪರಿಶೀಲಿಸಲಾಗುತ್ತಿದೆ. ಮಾತ್ರವಲ್ಲ, ಮೂಲ ಮಾಲೀಕರು ಯಾರು ಎಂಬುದನ್ನು ವಿವಿಧ ಮೂಲಗಳಿಂದ ತಿಳಿದು ಮನವರಿಕೆ ಮಾಡಿಕೊಂಡ ನಂತರವೇ ನೋಂದಣಿ ಪ್ರಕ್ರಿಯೆಗೆ ಮುನ್ನುಡಿ ಬರೆಯಲಾಗುತ್ತಿದೆ ಎಂದರು.
ಅಲ್ಲದೇ, ಮನೀಷ್ ಮಾನಿಕಚಂದ್ ಪಾರೇಖ್ ಪ್ರಕರಣಕ್ಕೆ ಸಂಬಂಧಿಸಿದಂತೆ ಖೊಟ್ಟಿ ದಾಖಲೆ ಸೃಷ್ಠಿಸಿರುವುದು ಗೊತ್ತಾಗುತ್ತಿದ್ದಂತೆ ಪೊಲೀಸರ ಗಮನಕ್ಕೆ ತರಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net