ಬಿಜೆಪಿಯಿಂದ 50 ಶಾಸಕರ ಖರೀದಿಗೆ ಯತ್ನ, ತಲಾ 50 ಕೋಟಿ ರೂ. ಆಫರ್ : ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ

siddaramaiah
Published on

ಮೈಸೂರು: ರಾಜ್ಯ ಸರ್ಕಾರವನ್ನು ಕಿತ್ತು ಹಾಕಲು ಕಾಂಗ್ರೆಸ್‌ನ 50 ಶಾಸಕರಿಗೆ ತಲಾ 50 ಕೋಟಿ ರೂ.ನೀಡಿ ಖರೀದಿಸಲು ಬಿಜೆಪಿ ಮುಂದಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಸೋಸಲೆ ಹೋಬಳಿಯ ಹೊರಳಹಳ್ಳಿ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ ಆವರಣದಲ್ಲಿ ಬುಧವಾರ ತಿ.ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ 470 ಕೋಟಿ ರೂ.ಮೊತ್ತದ ವಿವಿಧ ಕಾಮಗಾರಿಗಳ ಉದ್ಘಾಟನೆ, ಕಟ್ಟಡಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಿ, ಫಲಾನುಭವಿಗಳಿಗೆ ಸವಲತ್ತು ವಿತರಿಸಿ ಮಾತನಾಡಿದರು.

ಶಾಸಕರನ್ನು ಖರೀದಿಸಲು ಇಷ್ಟೊಂದು ದೊಡ್ಡ ಮೊತ್ತ ಬಿಜೆಪಿಗೆ ಎಲ್ಲಿಂದ ಬಂತು? ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಆರ್. ಅಶೋಕ್, ಬಿ.ವೈ. ವಿಜಯೇಂದ್ರ ನೋಟ್‌ಪ್ರಿಂಟ್ ಮಾಡಿದ್ರಾ? ಎಲ್ಲಿಂದ ಇವರಿಗೆ ಇಷ್ಟೊಂದು ಹಣ ಬಂತು? ಕೋಟಿಗಟ್ಟಲೇ ಲಂಚದ ಹಣ ಅವರ ಬಳಿ ಇದ್ದು, ಅದನ್ನು ಉಪಯೋಗಿಸಿ ಒಬ್ಬೊಬ್ಬ ಶಾಸಕರನ್ನು ಖರೀದಿಸಲು ಪ್ರಯತ್ನ ಮಾಡಿದ್ದಾರೆ. ಆದರೆ, ನಮ್ಮ ಶಾಸಕರು ಇದಕ್ಕೆ ಒಪ್ಪಲಿಲ್ಲ. ಹಾಗಾಗಿ ಸರ್ಕಾರದ ಮೇಲೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಬಡವರ ಪರ ಇದ್ದಾರೆ ಎಂಬ ಹೊಟ್ಟೆಉರಿ ಬಿಜೆಪಿಗೆ ಇದೆ. ನನ್ನನ್ನು ಮುಟ್ಟಿದರೆ ನಮ್ಮ ಕರ್ನಾಟಕದ ಜನ ನಿಮ್ಮನ್ನು ಸುಮ್ಮನೆ ಬಿಡೋದಿಲ್ಲ. ಐಟಿ, ಇಡಿ, ಸಿಬಿಐ ಹಾಗೂ ರಾಜ್ಯಪಾಲರನ್ನು ದುರುಪಯೋಗ ಪಡಿಸಿಕೊಂಡು ಆಟ ಆಡ್ತೀರಾ? ಅರವಿಂದ್ ಕೇಜ್ರಿವಾಲ್ ಆಯ್ತು, ಈಗ ನನ್ನ ಮತ್ತು ನನ್ನ ಪತ್ನಿಯನ್ನು ಟಾರ್ಗೆಟ್ ಮಾಡ್ತಾ ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾನು ನೆನ್ನೆ ಮೊನ್ನೆ ಮಂತ್ರಿಯಾದವನಲ್ಲ. 40 ವರ್ಷದಿಂದ ಮಂತ್ರಿಯಾಗಿದ್ದೀನಿ. ಸುಳ್ಳು ಕೇಸಲ್ಲಿ ನನ್ನನ್ನು, ನನ್ನ ಪತ್ನಿಯನ್ನು ಎಳೀತೀರಾ? ರಾಜ್ಯದ ಜನರೇನು ಮೂರ್ಖರಾ? ರಾಜ್ಯದ ಜನರ ಆಶೀರ್ವಾದ ನನ್ನ ಮೇಲೆ ಇರುವವರೆಗೂ ನಾನು ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಷಡ್ಯಂತ್ರಗಳಿಗೆ ಜಗ್ಗಲ್ಲ, ಬಗ್ಗಲ್ಲ. ಸುಖಾ ಸುಮ್ಮನೆ ನನ್ನ ತಂಟೆಗೆ ಬಂದರೆ ಸುಮ್ಮನಿರಲ್ಲ ಎನ್ನುವ ಎಚ್ಚರಿಕೆಯನ್ನು ನೀವು ಬಿಜೆಪಿಗೆ ನೀಡಬೇಕಾಗಿದೆ ಎಂದರು.

ರಾಜ್ಯದಲ್ಲಿ ನಮ್ಮ ಐದು ಗ್ಯಾರಂಟಿಗಳು ಯಶಸ್ವಿಯಾಗಿ ಜಾರಿಯಾದ ಬಳಿಕ ಬಿಜೆಪಿ ಮತ್ತು ಜೆಡಿಎಸ್‌ಭಯಾನಕ ಸುಳ್ಳುಗಳನ್ನು ಹೊಸೆಯುತ್ತಿದ್ದಾರೆ. ರಾಜ್ಯ ಸರ್ಕಾರದ ಬಳಿ ಅಭಿವೃದ್ಧಿಗೆ ಹಣ ಇಲ್ಲ ಎನ್ನುವ ಹಸಿ ಹಸಿ ಸುಳ್ಳಿನ ಅಪಪ್ರಚಾರ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಗ್ಯಾರಂಟಿಗಳಿಗಾಗಿ 56 ಸಾವಿರ ಕೋಟಿ ರೂ. ವಿನಿಯೋಗಿಸುತ್ತಿದ್ದು, ಅಭಿವೃದ್ಧಿಗೆ 1.20 ಲಕ್ಷ ಕೋಟಿ ರೂ. ಖರ್ಚು ಮಾಡುತ್ತಿದೆ ಎಂದು ಹೇಳಿದರು.

ಬಿಜೆಪಿಯವರಿಗೆ ನಾನು ನೇರವಾಗಿ ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ. ರಾಜ್ಯದಲ್ಲಿ ಬಿಜೆಪಿಯವರು ನಮ್ಮ ಗ್ಯಾರಂಟಿಗಳ ಫಲಾನುಭವಿಗಳಲ್ಲವಾ? ಬಿಜೆಪಿಯವರು ಉಚಿತವಾಗಿ ಬಸ್‌ನಲ್ಲಿ ಓಡಾಡುತ್ತಿಲ್ಲವಾ? ಬಿಜೆಪಿಯವರು ಉಚಿತ ವಿದ್ಯುತ್ ಪಡೆಯುತ್ತಿಲ್ಲವಾ? ಬಿಜೆಪಿಯವರು ಗೃಹಲಕ್ಷ್ಮೀ ಹಣ ಪಡೆಯುತ್ತಿಲ್ಲವಾ? ನಾವು ಗ್ಯಾರಂಟಿ ಯೋಜನೆ ಸೌಲಭ್ಯ ಪಡೆಯುತ್ತಿಲ್ಲ ಎಂದು ಬಿಜೆಪಿಯವರು ಎದೆ ಮುಟ್ಟಿಕೊಂಡು ಹೇಳಲಿ ನೋಡೋಣ. ಸರ್ಕಾರದ ಗ್ಯಾರಂಟಿ ಫಲಾನುಭವಿಗಳನ್ನು ಅವಮಾನಿಸಿ, ಅಪಪ್ರಚಾರ ಮಾಡುವು ದನ್ನು ನಿಲ್ಲಿಸದಿದ್ದರೆ ಫಲಾನುಭವಿಗಳು ನಿಮಗೆ ಸರಿಯಾದ ಪಾಠ ಕಲಿಸ್ತಾರೆ ಎಂದು ಎಚ್ಚರಿಸಿದರು.

ನನ್ನ ಮೇಲೆ ಹೊರಿಸಿರುವ ಮುಡಾ ಕೇಸ್ ನೂರಕ್ಕೆ ನೂರು ಸುಳ್ಳು ಕೇಸ್. 40 ವರ್ಷಗಳ ರಾಜಕೀಯ ಜೀವನದಲ್ಲಿ ನನ್ನ ಮೇಲೆ ಒಂದೇ ಒಂದು ಕಳಂಕ ಇಲ್ಲ. ಕೇವಲ 14 ಸೈಟ್‌ಗಳನ್ನು ಪಡೆದುಕೊಳ್ಳಲು ನಾನು ಇಷ್ಟು ವರ್ಷ ರಾಜಕೀಯ ಮಾಡಬೇಕಾಗಿತ್ತಾ? ಜನರಿಗೆ ಎಲ್ಲ ವಿಚಾರಗಳು ಅರ್ಥವಾಗುತ್ತದೆ. ಅವರನ್ನು ಮೂರ್ಖರು ಅಂದುಕೊಂಡಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯವರಿಗೆ ಜನರು ನೆಮ್ಮದಿಯಾಗಿ ಇರುವುದು ಇಷ್ಟವಿಲ್ಲ. ಸಮಾಜದಲ್ಲಿ ಅಶಾಂತಿ ಇರಬೇಕು, ಒಬ್ಬರನ್ನೊಬ್ಬರು ಎತ್ತಿಕಟ್ಟಬೇಕು, ಹಿಂದು-ಮುಸ್ಲಿಮರ ನಡುವೆ ಹುಳಿ ಹಿಂಡಬೇಕು, ಇದು ಅವರ ಬಯಕೆಯಾಗಿದೆ. ಹಿಂದುಳಿದವರು, ಅಲ್ಪಸಂಖ್ಯಾತರಿಗೆ ಯಾವುದೇ ಸೌಲಭ್ಯ ಕೊಡಬಾರದು, ಅವರು ಹಾಗೆಯೇ ಇರಬೇಕು ಎಂದು ಬಿಜೆಪಿ ಹಾಗೂ ಜೆಡಿಎಸ್ ಬಯಸುತ್ತಿದೆ. ಅದಕ್ಕೆ ನೀವು ‘ಸಿದ್ದರಾಮಯ್ಯ ಸರ್ಕಾರದಿಂದ ನಮಗೆ ಅನುಕೂಲವಾಗುತ್ತಿದೆ. ಸಿದ್ದರಾಮಯ್ಯ ಸರ್ಕಾರ ಉಳಿಯಬೇಕು’ ಎಂದು ಗಟ್ಟಿಯಾಗಿ ಹೇಳಬೇಕು. ನೀವು ತಕ್ಕ ಉತ್ತರ ನೀಡಿದಾಗ ಮಾತ್ರ ಅವರು ಸುಮ್ಮನಾಗಲು ಸಾಧ್ಯ ಎಂದರು.

ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್, ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್, ಸಂಸದ ಸುನಿಲ್ ಬೋಸ್, ವಿಧಾನ ಪರಿಷತ್ ಸದಸ್ಯರಾದ ಯತೀಂದ್ರ ಸಿದ್ದರಾಮಯ್ಯ, ಡಾ.ತಿಮ್ಮಯ್ಯ, ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್, ಮಾಜಿ ಶಾಸಕಿ ಸುನೀತಾ ವೀರಪ್ಪಗೌಡ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net