

ಶಿವಮೊಗ್ಗ: ಕೇಂದ್ರ ಸರ್ಕಾರ ರಾಜ್ಯಕ್ಕೆ ಹೆಚ್ಚುವರಿಯಾಗಿ ಅಕ್ಕಿ ನೀಡಲು ನಿರಾಕರಿಸಿದರೂ ರಾಜ್ಯದ ಬಿಜೆಪಿ ಸಂಸದರು ಮಾತನಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು ವಿನೋಬನಗರ ಪೊಲೀಸ್ ಚೌಕಿಯಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ನಿವಾಸಕ್ಕೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಬಳಿಕ ಬಿಡುಗಡೆ ಮಾಡಿದರು.
ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡಲು ನಿರಾಕರಿಸಿದ ಕೇಂದ್ರ ಸರ್ಕಾರ, ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಮತ್ತಿತರ ಮೂಲಕ ಹಣವನ್ನೂ ನೀಡುತ್ತಿಲ್ಲ. ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
ಕೇಂದ್ರ ಸರ್ಕಾರ ಕಳೆದ 9 ವರ್ಷದಿಂದಲೂ ದ್ವೇಷ ರಾಜಕಾರಣ ಮಾಡುತ್ತಿದೆ. 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸದೆ ಜನವಿರೋಧಿ ಸರ್ಕಾರವಾಗಿ ಪರಿಣಮಿಸಿದೆ. ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಘೋಷಿಸಿದ್ದ ಗ್ಯಾರಂಟಿ ಬೆಂಬಲಿಸಿದ್ದ ಜನರ ವಿರುದ್ಧ ಕೇಂದ್ರ ಸರ್ಕಾರ ದ್ವೇಷ ಕಾರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಅಕ್ಕಿ ನೀಡಲಿಲ್ಲ. ಹೆಚ್ಚುವರಿ ಅಕ್ಕಿಯನ್ನು ನೀಡದಂತೆ ರಾಷ್ಟ್ರೀಯ ಆಹಾರ ನಿಗಮಕ್ಕೂ ಸೂಚನೆ ನೀಡಿತು. ನಮ್ಮ ಗ್ಯಾರಂಟಿ ಅನುಷ್ಟಾನಕ್ಕೆ ಬರಬಾರದು ಎಂಬುದೇ ಬಿಜೆಪಿಯ ಮುಖ್ಯ ಉದ್ದೇಶ. ಇದೇ ಕಾರಣಕ್ಕೆ ಎಲ್ಲ ಕಡೆಗಳಲ್ಲೂ ತೊಂದರೆ ನೀಡುತ್ತಿದೆ. ಆದರೆ ರಾಜ್ಯದಿಂದ ಆಯ್ಕೆಯಾದ ಸಂಸದರು ಇದರ ಬಗ್ಗೆ ಮಾತನಾಡದೇ ಇರುವುದು ಆಶ್ಚರ್ಯ ಮೂಡಿಸಿದೆ ಎಂದು ದೂರಿದರು.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಪಿ ಗಿರೀಶ್, ಉತ್ತರ ಬ್ಲಾಕ್ ಅಧ್ಯಕ್ಷ ಬಿ.ಲೋಕೇಶ್, ಗ್ರಾಮಾಂತರ ಅಧ್ಯಕ್ಷ ಇ.ಟಿ.ನಿತಿನ್, ದಕ್ಷಿಣ ಬ್ಲಾಕ್‌ನ ಅಧ್ಯಕ್ಷ ಎಸ್. ಕುಮಾರೇಶ್, ಭದ್ರಾವತಿ ಬ್ಲಾಕ್ ಅಧ್ಯಕ್ಷ ಅಫ್ತಾಬ್ ಅಹಮದ್, ರಾಜ್ಯ ಕಾರ್ಯದರ್ಶಿ ಆರ್.ಕಿರಣ್, ಪ್ರಮುಖರಾದ ಟಿ.ವಿ.ರಂಜಿತ್, ಸಂದೀಪ್, ಸುಂದರರಾಜ್, ಕೆ.ಎಲ್.ಪವನ್, ರಾಹುಲ್, ಪೂರ್ಣೇಶ್, ಮಸ್ತಾನ್ ಮುಂತಾದವರು ಪ್ರತಿಭಟನೆಯಲ್ಲಿದ್ದರು.