ಅಟಲ್ ಭೂಜಲ್ ಪರಿಣಾಮಕಾರಿ ಅನುಷ್ಠಾನ ; ಜಿಪಂ ಸಿಇಒ ವಿದ್ಯಾಕುಮಾರಿ ಮಾಹಿತಿ ಜಿಲ್ಲೆಯ 199 ಗ್ರಾಪಂಗಳಲ್ಲಿ ಯೋಜನೆ

17Tmk_Devara_Dasimayya_Jayanthi
Published on

ತುಮಕೂರು: ಅಟಲ್ ಭೂಜಲ್ ಯೋಜನೆಯನ್ನು ಸಾರ್ವಜನಿಕರ ಹಾಗೂ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕಿದೆ ಎಂದು ಜಿಪಂ ಸಿಇಒ ಕೆ.ವಿದ್ಯಾಕುಮಾರಿ ಹೇಳಿದರು.

ನಗರದ ಜಿಲ್ಲಾ ಬಾಲಭವನದಲ್ಲಿ ಜಿಪಂ ಹಾಗೂ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಶನಿವಾರ ಅಟಲ್ ಭೂಜಲ್ ಯೋಜನೆ ಕಾರ್ಯಾಗಾರಕ್ಕೆ ಚಾಲನೆ ನೀಡಿ, ಯೋಜನೆಯಲ್ಲಿ ಸಮುದಾಯ ಮತ್ತು ಪಾಲುದಾರರನ್ನು ಅಂತರ್ಜಲ ನಿರ್ವಹಣೆಯಲ್ಲಿ ಭಾಗವಹಿಸಲು ಉತ್ತೇಜಿಸುವ ಮೂಲಕ ಸುಸ್ಥಿರ ಅಂತರ್ಜಲ ನಿರ್ವಹಣೆ ಮಾಡಲಾಗುತ್ತದೆ ಎಂದರು.

ಅಟಲ್ ಭೂಜಲ್ ಯೋಜನೆಯು ದೇಶದ 7 ರಾಜ್ಯಗಳಲ್ಲಿ ಅನುಷ್ಠಾನಗೊಳ್ಳುತ್ತಿದ್ದು, ರಾಜ್ಯದಲ್ಲಿ 14 ಜಿಲ್ಲೆಗಳ 41 ತಾಲೂಕುಗಳಲ್ಲಿ ಅನುಷ್ಠಾನಗೊಳ್ಳುತ್ತಿದೆ. ಯೋಜನೆ ಕಾರ್ಯಗತಕ್ಕೆ ಹೂಡಿಕೆ ಮತ್ತು ಪ್ರೋತ್ಸಾಹ ಘಟಕಗಳಿಂದ 1,201.52 ಕೋಟಿ ರೂ. ಅನುದಾನ ಹಂಚಿಕೆಯಾಗಲಿದೆ. ಜಿಲ್ಲೆಯಲ್ಲಿ ಅಂತರ್ಜಲ ಅತಿಶೋಷಿತ ಪ್ರದೇಶಗಳಾದ ಚಿಕ್ಕನಾಯಕನಹಳ್ಳಿ, ತಿಪಟೂರು, ಮಧಗಿರಿ, ಕೊರಟಗೆರೆ, ಶಿರಾ ಹಾಗೂ ತುಮಕೂರು ಒಟ್ಟು 6 ತಾಲೂಕುಗಳ 199 ಗ್ರಾಪಂಗಳ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ವಿದ್ಯಾಕುಮಾರಿ ತಿಳಿಸಿದರು.

ನೀರಿನ ಸಂಗ್ರಹಣೆ, ಬೇಡಿಕೆ ಹಾಗೂ ಪೂರೈಕೆಗಳನ್ನು ಅಂದಾಜು ಮಾಡಿ ಸದ್ಭಳಕೆ ಮಾಡಿಕೊಳ್ಳಲು ನೀರಿನ ಆಯವ್ಯಯ ತಯಾರಿಸಬೇಕು, ಮಳೆ ನೀರಿನ ಸಂರಕ್ಷಣೆ, ಅಂತರ್ಜಲ ಮರುಪೂರಣ ಕಾಮಗಾರಿಗಳನ್ನು ಕೈಗೊಳ್ಳಬೇಕು. ಪ್ರತಿಯೊಂದು ಇಲಾಖಾವಾರು ನೀರಿನ ಬಳಕೆ ಹಾಗೂ ಲಭ್ಯತೆಯ ಅಂಕಿ ಅಂಶಗಳನ್ನು ಸಿದ್ಧಪಡಿಸಿ ವಿವೇಚನೆಯಿಂದ ನೀರು ಬಳಸುವ ಹಾಗೂ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸಲು ಜಿಪಂ ಉಪಕಾರ್ದರ್ಶಿ ಟಿ.ಕೆ.ರಮೇಶ್ ಸಲಹೆಯಿತ್ತರು.

ಹಿರಿಯ ಭೂ ವಿಜ್ಞಾನಿ ಷಫೀ ಉಲ್ಲಾ, ಭೂ ವಿಜ್ಞಾನಿ ನಾಗವೇಣಿ, ಜಿಲ್ಲಾ ಐಇಸಿ ಸಂಯೋಜಕ ಉಮೇಶ್ ಹುಲಿಕುಂಟೆ, ಜಿಪಂ ಸಹ ಕಾರ್ಯದರ್ಶಿ ಮಹೇಶ್ ಕುಮಾರ್, ಜೆಇ ಶ್ರೀನಿವಾಸ್, ವ್ಯವಸ್ಥಾಪಕ ಸಂಜೀವಪ್ಪ, ವಿಷಯ ನಿರ್ವಾಹಕ ಮಂಜುನಾಥ್ ಉಪಸ್ಥಿತರಿದ್ದರು.

ಜಲ ಸಾಕ್ಷರತೆ ಪ್ರಥಮ ಆದ್ಯತೆಯಾಗಲಿ : ವಿಶ್ವದಲ್ಲಿ 3ನೇ ಮಹಾಯುದ್ಧವೇನಾದರೂ ನಡೆದರೇ ಅದು ನೀರಿಗಾಗಿ ನಡೆಯುತ್ತದೆ. ನೀರಿಲ್ಲದೆ ನಾವಿಲ್ಲ, ಗಿಡ, ಮರ ಪ್ರಾಣಿ, ಪಕ್ಷಿಗಳು ಇಲ್ಲ. ಆಹಾರ ಉತ್ಪಾದನೆ ಇಲ್ಲ. ಜೀವ ಸಂಕುಲವು ವಿನಾಶದ ಅಂಚಿಗೆ ತಲುಪುತ್ತದೆ. ಇಂದು ನಾವು ನೀರಿನ ವಿಷಯದಲ್ಲಿ ಜಾಗೃತರಾಗದಿದ್ದಲ್ಲಿ ಮುಂದಿನ ಭವಿಷ್ಯ ಕರಾಳವಾಗುತ್ತದೆ. ಈ ಹಿನ್ನೆಲೆಯಲ್ಲಿ ಹಿತಮಿತ ಬಳಕೆ, ಮಳೆ ನೀರಿನ ಸಂರಕ್ಷೆಣೆ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಿದ್ದು, ಜಲ ಸಾಕ್ಷರತೆ ಇಂದಿನ ಪ್ರಥಮ ಆದ್ಯತೆಯಾಗಬೇಕು ಎಂದು ಮೈತ್ರಿ ಸೇವಾ ಸಂಸ್ಥೆಯ ನೀರು ಮತ್ತು ನೈರ್ಮಲ್ಯ ತಜ್ಞ ಕೆ.ಗುರುದೇವ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net