

ಶಿರಹಟ್ಟಿ: ಜೀವನದಲ್ಲಿ ಯಶಸ್ಸಿನ ಮೆಟ್ಟಿಲೇರಲು ಮತ್ತು ಸದ್ಗತಿ ಕಾಣಲು ಗುರುವಿನ ಅಂತಃಕರುಣೆ ಹಾಗೂ ಮಾರ್ಗದರ್ಶನ ಅಗತ್ಯ ಎಂದು ಶಿರಹಟ್ಟಿ ಫಕೀರೇಶ್ವರಮಠದ ಉತ್ತರಾಧಿಕಾರಿ ಶ್ರೀ ಫಕೀರದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಫಕೀರೇಶ್ವರ ಮಠದಲ್ಲಿ ಶರಣ ಸಾಹಿತ್ಯ ಪರಿಷತ್ ವತಿಯಿಂದ ಇತ್ತೀಚಿಗೆ ಏರ್ಪಡಿಸಿದ್ದ ಗುರು ಪೌರ್ಣಿಮೆ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ‘ಯಾವುದೇ ವ್ಯಕ್ತಿ ಬದುಕಿನಲ್ಲಿ ಯಶಸ್ಸು ಸಾಧಿಸಲು ಗುರು ಮತ್ತು ಗುರಿ ಇವೆರಡರ ಅಗತ್ಯವಿದೆ. ಅವುಗಳ ಪಾಲನೆ ಮಾಡದಿದ್ದರೆ ಪ್ರಯತ್ನಕ್ಕೆ ಯಶಸ್ಸು ಸಿಗಲಾರದು. ಯಾವ ರೀತಿ ಮಡಕೆ ಮಾಡಲು ಮಣ್ಣು, ಆಭರಣ ಮಾಡಲು ಹೊನ್ನಿನ ಅಗತ್ಯವಿದೆಯೋ ಅದೇ ರೀತಿ ಬದುಕಿನಲ್ಲಿ ಯಶಸ್ಸಿನ ಶಿಖರವೇರಲು ಒಬ್ಬ ಸಮರ್ಥ ಗುರುವಿನ ಮಾರ್ಗದರ್ಶನ ಅಗತ್ಯ’ ಎಂದರು.
ಗುರು ಪರಂಪರೆಗೆ ಕೃತಜ್ಞತೆ ಸಲ್ಲಿಸುವುದೇ ಗುರು ಪೌರ್ಣಿಮೆಯ ಮಹತ್ವ. ಜ್ಞಾನ ಮತ್ತು ಪ್ರೇಮ ಜತೆಯಾಗಿ ಸಂಭ್ರಮಿಸಿದಾಗ ಜೀವನ ಫಲಪ್ರದವಾಗುತ್ತದೆ. ಆತ್ಮವೈಶಾಲ್ಯತೆ ಬೆಳೆಸಿಕೊಂಡು ಆಧ್ಯಾತ್ಮಿಕ ಹಾದಿಯಲ್ಲಿ ನಡೆದಾಗ ಬದುಕಿನಲ್ಲಿ ಸದ್ಗತಿ ಕಾಣಲು ಸಾಧ್ಯ ಎಂದರು.
ತಾಲೂಕು ಶಸಾಪ ಅಧ್ಯಕ್ಷ ಕೆ.ಎ. ಬಳಿಗೇರ ಮಾತನಾಡಿದರು. ಶ್ರೀವೀರಬಸವ ದೇವರು ಶರಣ ಪೌರ್ಣಿಮೆಯ ಉಪನ್ಯಾಸ ನೀಡಿದರು. ಎಸ್.ಬಿ. ಮಹಾಜನಶೆಟ್ಟರ, ಬಿ.ಎಸ್. ಹಿರೇಮಠ, ಜಿ.ಕೆ. ಹಳ್ಳಿ, ಎಚ್.ಎಂ. ದೇವಗಿರಿ, ಜಿ.ಬಿ. ಚಿಂಚಲಿ, ಷಡಕ್ಷರಿ ಶಾಸ್ತ್ರೀಗಳು, ಜಯಶ್ರೀ ನೂರಶೆಟ್ಟರ, ಮಧುಮತಿ ಮಹಾರಾಜಪೇಟ್, ಗೀತಾ ಹಲಸೂರ, ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ನಂದಾ ಕಪ್ಪತ್ತನವರ, ಎಚ್.ಎಂ. ಪಲ್ಲೇದ ಇತರರಿದ್ದರು. ಶ್ರೀಸಂಗನಬಸವ ದೇವರು ಕಾರ್ಯಕ್ರಮ ನಿರ್ವಹಿಸಿದರು.