ವ್ರತಾನುಷ್ಠಾನದಿಂದ ಸಾತ್ವಿಕ ಆನಂದ ಪ್ರಾಪ್ತಿ

SWARNAVALLI SHREE
Published on

ಶಿರಸಿ: ಶರನ್ನವರಾತ್ರಿಯಂಥಹ ವ್ರತ ಆಚರಿಸಿದರೆ ಅದೇ ಒಂದು ತಪಸ್ಸಾಗುತ್ತದೆ. ಇಂತಹ ವ್ರತ ಆಚರಿಸುವುದರಿಂದ ಮನಸಿಗೆ ಆನಂದದ ಅನುಭವವಾಗುತ್ತದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಹೇಳಿದರು.

ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ವಿಜಯ ದಶಮಿ ಹಿನ್ನೆಲೆಯಲ್ಲಿ ಅವರು ಆಶೀರ್ವಚನ ನೀಡಿದರು. ಶರನ್ನವರಾತ್ರಿ ವ್ರತ ದೀರ್ಘಕಾಲ ನಡೆಯುವಂಥದ್ದು. ಇಂದು ಅನೇಕ ವ್ರತಗಳು ಕೈ ಬಿಟ್ಟು ಹೋಗಿವೆ. ಆದರೆ, ಇಷ್ಟು ದೀರ್ಘಕಾಲದ ಒಂದು ವ್ರತ ಇಂದಿಗೂ ಉಳಿದುಕೊಂಡಿದೆ. ವ್ರತಾನುಷ್ಠಾನದಿಂದ ಸಾತ್ವಿಕ ಆನಂದವಾಗುತ್ತದೆ ಎಂದರು.

ವ್ರತದ ಅನುಷ್ಠಾನದಲ್ಲಿ ಒಂದಿಷ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಶಾಸ್ತ್ರದಲ್ಲಿ ಹೇಳಿದ ಕ್ರಮದಂತೆ ನಾವು ವ್ರತ ಆಚರಿಸಿದರೆ ಯಾವುದೇ ನಷ್ಟ, ಹಾನಿಗಳು, ಆರೋಗ್ಯಕ್ಕೆ ತೊಂದರೆ ಆಗುವುದಿಲ್ಲ. ಅದರಿಂದ ಒಳ್ಳೆಯದೇ ಆಗುತ್ತದೆ. ವ್ರತಾನುಷ್ಠಾನದಿಂದ ದೊರೆಯುವ ಸಾತ್ವಿಕವಾದ ಆನಂದದ ಕಡೆಗೆ ನಮ್ಮ ಗಮನ ಇರಿಸಿ ಅನುಷ್ಠಾನದಲ್ಲಿ ತೊಡಗಬೇಕು. ಆಗ ಬುದ್ಧಿ ಪ್ರಸನ್ನತೆ ಗೊಳ್ಳುತ್ತದೆ ಎಂದರು.

ಮನುಷ್ಯನು ವ್ಯಸನಗಳಿಗೆ ಒಳಗಾದರೆ ಮನಸಿನ ಮತ್ತು ಕುಟುಂಬದ ನೆಮ್ಮದಿ ಹಾಳಾಗುತ್ತದೆ. ಆರೋಗ್ಯ ಕೆಡುತ್ತದೆ, ಆರ್ಥಿಕವಾಗಿ ನಷ್ಟವಾಗುತ್ತದೆ. ಮನುಷ್ಯನು ವ್ಯಸನದಿಂದ ಹೊರಬರಲು ಇಂತಹ ವ್ರತನಿಯಮ ಆಚರಿಸಬೇಕು. ಅಲ್ಲಿ ಆನಂದ ಇರುವುದನ್ನು ಕಂಡುಕೊಳ್ಳಬೇಕು ಎಂದರು.

ಈ ವೇಳೆ ಕಿರಿಯ ಸ್ವಾಮೀಜಿ ಶ್ರೀ ಆನಂದಬೋಧೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಇದಕ್ಕೂ ಮುನ್ನ ಶ್ರೀದೇವರಲ್ಲಿ ಹಿರಿಯ ಗುರುಗಳು ಸ್ವರಚಿತ ಶ್ಲೋಕದೊಂದಿಗೆ ಪ್ರಾರ್ಥನೆ ಸಲ್ಲಿಸಿದರು. ಒಂಭತ್ತು ದಿನದ ಶರನ್ನವರಾತ್ರಿ ಉತ್ಸವದಲ್ಲಿ ಮಾತೆ ಶ್ರೀ ರಾಜ ರಾಜೇಶ್ವರಿ ದೇವರಿಗೆ ವಿಶೇಷ ಅಲಂಕಾರ, ಮಹಾಪೂಜೆ, ವಿವಿಧ ಧಾರ್ವಿುಕ ಕಾರ್ಯಗಳು, ಪಾರಾಯಣಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net