

ಶಿವಮೊಗ್ಗ:ಸಮಾಜದಲ್ಲಿ ಕೆಲವರಿಗೆ ನಾನು, ನನಗೆ, ನಂದು ಎಂಬುದು ಬಿಟ್ಟರೆ ಬೇರೆ ಪ್ರಪಂಚವೇ ಇಲ್ಲ. ಆದರೆ ಈ ಮೂರರ ಮೇಲಿನ ಮೋಹವನ್ನು ತೊರೆದರೆ ಮಾತ್ರ ಮೋಕ್ಷ ಪ್ರಾಪ್ತಿ ಆಗಲಿದೆ ಎಂಬುದನ್ನು ಜೀವನದಲ್ಲಿ ಪ್ರತಿಯೊಬ್ಬರೂ ಅರ್ಥ ಮಾಡಿಬೇಕು ಎಂದು ಹಾವೇರಿ ಜಿಲ್ಲೆ ಆನಂದವನದ ಶ್ರೀ ಕ್ಷೇತ್ರ ಅಗಡಿಯ ಶ್ರೀ ಗುರುದತ್ತಮೂರ್ತಿ ಚಕ್ರವರ್ತಿ ಸ್ವಾಮೀಜಿ ಹೇಳಿದರು.
ಕೋಟೆ ರಸ್ತೆಯ ಶ್ರೀ ಗಾಯತ್ರಿ ದೇವಸ್ಥಾನದಲ್ಲಿ ಭಾನುವಾರ ತಾಲೂಕು ಬ್ರಾಹ್ಮಣ ಸೇವಾ ಸಂಘ, ನಗರ ಮತ್ತು ಗ್ರಾಮಾಂತರದ ವಿವಿಧ ವಿಪ್ರ ಸಂಘಟನೆಗಳ ಸಹಯೋಗದೊಂದಿಗೆ ಶ್ರೀ ಗಾಯತ್ರಿ ಪ್ರತಿಪತ್ ಮಹೋತ್ಸವದ ನಿಮಿತ್ತ ಶ್ರೀ ಗಾಯತ್ರಿ ಮಾತೆಯ ರಾಜಬೀದಿ ಉತ್ಸವದ ಸಾನ್ನಿಧ್ಯ ವಹಿಸಿ ಆಶೀವರ್ಚನ ನೀಡಿದ ಅವರು, ಇಲ್ಲೇ(ಭೂಮಿ) ಇದ್ದರೂ ಯಾವುದೂ(ಸಂಪತ್ತು) ನಮ್ಮದಲ್ಲ ಎಂದು ತಿಳಿಯುವುದೇ ನಿಜವಾದ ಮೋಕ್ಷ ಎಂದರು.
ಸಂಸ್ಕಾರ ಇದ್ದವರಿಗೆ ಮಾತ್ರ ಬ್ರಾಹ್ಮಣತ್ವ ಪ್ರಾಪ್ತಿ ಆಗಲಿದೆ. ಬ್ರಾಹ್ಮಣ ಎನ್ನುವುದು ಮನಸ್ಸಿನಲ್ಲಿ ಇರಬೇಕೋ ವಿನಃ ಆಚರಣೆಯಲ್ಲಲ್ಲ. ಬೇಕಾಬಿಟ್ಟಿಯಾಗಿ ಗಾಯತ್ರಿ ಜಪ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ನಿತ್ಯವೂ ಶ್ರದ್ಧೆಯಿಂದ ಆಚರಣೆ ಮಾಡಿದಾಗ ಜಪ ಮಾಡಿದ್ದು ಸಾರ್ಥಕವಾಗಲಿದೆ ಎಂದು ಹೇಳಿದರು.
ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೆ.ಸಿ.ನಟರಾಜ್ ಭಾಗವತ್ ಮಾತನಾಡಿ, ಶಿವಮೊಗ್ಗದಲ್ಲಿ ಗಾಯತ್ರಿ ಮಾತೆಯ ಉತ್ಸವವನ್ನು ಅನೇಕ ವರ್ಷಗಳಿಂದ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ವಿಪ್ರ ಸಮಾಜದವರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದೇ ವಿರಳವಾಗುತ್ತದೆ. ಹಣ ಸಂಪಾದನೆ ದಾರಿಯ ಹಿಂದೆ ಬಿದ್ದು ನಮ್ಮ ಆಚಾರ, ವಿಚಾರ, ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿಯೊಬ್ಬರೂ ಸಮಾಜದ ಬಗ್ಗೆ ಯೋಚನೆ ಮಾಡಬೇಕು. ಪಾಲಕರು ಹೆಚ್ಚಾಗಿ ಇಂದಿನ ಮಕ್ಕಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದು ಗಂಭೀರ ಸ್ವರೂಪದ ಸಂಕಷ್ಟಕ್ಕೆ ದಾರಿ ಮಾಡಿಕೊಡುತ್ತಿದೆ. ಮಕ್ಕಳ ಮೇಲಿನ ಒತ್ತಡ ತಗ್ಗಿಸುವ ಬಗ್ಗೆ ಆಲೋಚನೆ ಮಾಡಬೇಕಿದೆ. ನಮ್ಮ ಆಚಾರ-ವಿಚಾರಗಳ ಪರಂಪರೆಯನ್ನು ಉಳಿಸಿಬೆಳೆಸಿಕೊಂಡು ಹೋಗಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಕೆ.ವೆಂಕಟೇಶ ರಾವ್ ಮಾತನಾಡಿ, ಸಂಘವು 77 ವಸಂತಗಳನ್ನು ಕಂಡಿದ್ದು ಆರೋಗ್ಯ ಸೇವೆ ಸೇರಿ ಹಲವು ಜನಪರ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಕೊಂಡು ಬರಲಾಗುತ್ತದೆ. ಪ್ರತಿ ವರ್ಷ ಧಾರ್ಮಿಕ ಕಾರ್ಯಗಳನ್ನು ನಡೆಸಲಾಗುತ್ತಿದೆ. ಗಾಯತ್ರಿ ಜಪದ ಅಂಗವಾಗಿ ಒಂದು ಲಕ್ಷ ಜಪ ಹಮ್ಮಿಕೊಳ್ಳಲಾಗಿದೆ ಎಂದರು.
ಬೆಂಗಳೂರಿನ ನಿವೃತ್ತ ಜಿಎಸ್‌ಟಿ ಸಹಾಯಕ ಆಯುಕ್ತ ನರಸಿಂಹ ಪ್ರಸಾದ್ ಮಾತನಾಡಿದರು. ಇದೇ ವೇಳೆ ಪುರೋಹಿತ ಶ್ರೀ ಶ್ರೀನಿವಾಸಮೂರ್ತಿ, ನಿವೃತ್ತ ಪ್ರಾಚಾರ್ಯ ಎಸ್.ಎನ್.ವೆಂಕಟ ನಾರಾಯಣರಾವ್, ಅಡಿಗೆ ಗುತ್ತಿಗೆದಾರ ಎ.ಎನ್.ದತ್ತಾತ್ರಿ, ಹಿರಿಯ ಪತ್ರಕರ್ತ ಎನ್.ಆರ್.ವೆಂಕಟೇಶ್, ಜ್ಯೋತಿಷಿ ಸತೀಶ್ ಕೌಶಿಕ್, ಸಂಗೀತ ಶಿಕ್ಷಕಿ ವೀಣಾ ನಾಯಕ್ ಅವರನ್ನು ಸನ್ಮಾನಿಸಲಾಯಿತು. ಸಂಘದ ದೇವಸ್ಥಾನ ಸಮಿತಿ ಸಂಚಾಲಕ ಎಸ್.ನಾಗರಾಜ್, ಗಾಯತ್ರಿ ಮಹಿಳಾ ಮಂಡಳಿ ಅಧ್ಯಕ್ಷೆ ವನಜಾ ರವಿಕುಮಾರ್ ಉಪಸ್ಥಿತರಿದ್ದರು.
ಶ್ರೀ ಗಾಯತ್ರಿ ಪ್ರತಿಪತ್ ಮಹೋತ್ಸವ ಅಂಗವಾಗಿ ಗಾಯತ್ರಿ ಮಾತೆಯ ರಾಜಬೀದಿ ಉತ್ಸವ ನಡೆಯಿತು. ಮಂಗಳವಾದ್ಯ ಮತ್ತು ಚಂಡೆವಾದ್ಯದೊಂದಿಗೆ ಶ್ರೀ ಗಾಯತ್ರಿ ದೇವಸ್ಥಾನದಿಂದ ಹೊರಟ ಮೆರವಣಿಗೆ ನಗರದ ಹಲವೆಡೆ ಸಂಚರಿಸಿ ದೇವಸ್ಥಾನಕ್ಕೆ ಮರಳಿತು. ಮೆರವಣಿಗೆಯಲ್ಲಿ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಕಾರ್ಪೊರೇಟರ್ ಸುರೇಖಾ ಮುರಳೀಧರ್ ಸೇರಿದಂತೆ ಹಲವು ಪಾಲ್ಗೊಂಡಿದ್ದರು.