ಅಧ್ಯಾತ್ಮ ಚಿಂತನೆಯಿಂದ ಮನಶಾಂತಿ ಪ್ರಾಪ್ತಿ

SWAMIJI
Published on

ಹೊಳೆಆಲೂರ: ಜೀವನದಲ್ಲಿ ಆಸ್ತಿ, ಐಶ್ವರ್ಯ, ಧನ ದಾನ್ಯ ಸೇರಿದಂತೆ ಲೆಕ್ಕವಿಲ್ಲದಷ್ಟು ಸಂಪತ್ತು ಸಂಪಾಧಿಸಬಹುದು. ಆದರೆ,ನೆಮ್ಮದಿ, ತೃಪ್ತಿ, ಮನದಾನಂದ, ಮೋಕ್ಷ ದೊರಕಬೇಕಾದರೆ ದೇವರು, ಧಾರ್ಮಿಕ ಚಟುವಟಿಕೆ, ಗುರುವಿನ ಸಂಘ, ಅಧ್ಯಾತ್ಮ ಚಿಂತನೆ ಅಳವಡಿಸಿಕೊಳ್ಳಬೇಕು ಎಂದು ನರಗುಂದ ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶಗೌಡ ಪಾಟೀಲ ಹೇಳಿದರು.

ಗ್ರಾಮದ ಶಿವಪಾರ್ವತಿ ಮಾಂಗಲ್ಯ ಮಂದಿರ ಆವರಣದಲ್ಲಿ ವೀರಭದ್ರೇಶ್ವರ ಸೇವಾ ಸಮಿತಿ ವತಿಯಿಂದ ಜರುಗುತ್ತಿರುವ ಅಭಿನವ ಮೃತ್ಯುಂಜಯ ಸ್ವಾಮಿಗಳ ಪ್ರವಚನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಂಗಳವಾರ ಮಾತನಾಡಿದ ಅವರು, ‘ಸ್ವಚ್ಛ ಮನಸಿನಿಂದ ಯಾವುದೇ ಕಾರ್ಯ ಆರಂಭಿಸಿದರೆ ನೂರೆಂಟು ವಿಘ್ನ ಎದುರಾದರೂ ಕೊನೆಗೆ ಸತ್ಯಕ್ಕೆ ಜಯವಾಗುತ್ತದೆ ಎಂಬುದಕ್ಕೆ 500 ವರ್ಷಗಳ ಹೋರಾಟದ ನಂತರ ನಿರ್ಮಾಣವಾಗಿರುವ ರಾಮ ಮಂದಿರವೇ ಸಾಕ್ಷಿ. ಪರಮಾತ್ಮನ ನಿಜ ಸ್ವರೂಪ ಅರಿಯಬೇಕಾದರೆ ಯೋಗ್ಯ ಮಾರ್ಗದರ್ಶನ ಮಾಡುವ ಗುರುವನ್ನು ಸ್ವೀಕರಿಸಬೇಕು. ನಿತ್ಯ ಅಧ್ಯಾತ್ಮ ಪ್ರವಚನ ಆಲಿಸಿ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಪಾವನವಾಗುತ್ತದೆ ಎಂದು ಹೇಳಿದರು.

ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಮಾತನಾಡಿ ಸೋಸಿಯಲ್ ಮೀಡಿಯಾ, ಮೊಬೈಲ್ ಹಾಗೂ ಕೆಲವು ಚಾನಲ್‌ಗಳು ಅಶ್ಲೀಲ, ಸಮಾಜಘಾತುಕ ವರದಿಗಳನ್ನು ಬಿತ್ತರಿಸುತ್ತಿರುವುದರಿಂದ ಮಕ್ಕಳು, ಯುವಕರ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಇದರಿಂದ ಸಾಮಾಜಿಕ ವ್ಯವಸ್ಥೆಯೇ ಬುಡಮೇಲಾಗುವ ಆತಂಕ ಎದುರಾಗಿದೆ. ಸರ್ಕಾರ ಜನ ಪ್ರತಿನಿಧಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.

ಮಣಕವಾಡದ ಅಭಿನವ ಮೃತ್ಯುಂಜಯ ನೇತೃತ್ವ ವಹಿಸಿದ್ದರು. ಯಲಬುರ್ಗಾ ಶ್ರೀಧರ ಮುರಡಿ ಮಠದ ಬಸವಲಿಂಗ ಶ್ರೀಗಳು, ಸದಾಶಿವ ಮಹಾಂತ ಶ್ರೀಗಳು, ಯಚ್ಚರೇಶ್ವರ ಶ್ರೀಗಳು, ರೇವಣಸಿದ್ಧೇಶ್ವರ ಸ್ವಾಮೀಜಿ, ದಶರಥ ಗಾಣಿಗೇರ, ಎಸ್.ವಿ. ಪಾಟೀಲ, ರಾಚಣ್ಣ ಪಟ್ಟಣದ, ಮಹಾಂತೇಶ ತಳವಾರ, ಚಂದ್ರಕಾಂತಗೌಡ ಪಾಟೀಲ, ಕಲ್ಮೇಶ್ವರ ಸಾಸಳ್ಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net