ನಿಷ್ಠೆಯಿಂದ ಅಂತರಂಗದ ಆನಂದ ಪ್ರಾಪ್ತಿ

5 SRS
Published on

ಶಿರಸಿ: ನಿಷ್ಠೆ ಇದ್ದಲ್ಲಿ ಆನಂದ ಸಿಗುತ್ತದೆ ಎಂದು ಸೋಂದಾ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾ ಸ್ವಾಮೀಜಿ ಹೇಳಿದರು.
ಇಲ್ಲಿನ ಸೋಂದಾ ಸ್ವರ್ಣವಲ್ಲಿ ಮಠದಲ್ಲಿ ಮಂಗಳವಾರ ಹುಬ್ಬಳ್ಳಿ ಧಾರವಾಡ, ದಾವಣಗೆರೆ, ಬೆಳಗಾವಿ ಭಾಗದ ಶಿಷ್ಯ ಭಕ್ತರಿಂದ ಗುರು ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು.

ಎಲ್ಲರೂ ಜೀವನದ ಉದ್ದಕ್ಕೂ ಏನೋ ಒಂದು ಬಯಸುತ್ತಾರೆ. ಅದು ಏನೆಂದರೆ ಆನಂದ ಸಿಗಬೇಕು, ಸುಖ ಸಿಗಬೇಕು ಎಂಬುದು. ಸಹಜವಾಗಿ ಎಲ್ಲ ಜನರೂ ಬಯಸುತ್ತಾರೆ. ಕೇವಲ ಮನುಷ್ಯ ಮಾತ್ರವಲ್ಲ, ಪ್ರಾಣಿಗಳೂ ಬಯಸುವುದು ಇದನ್ನೇ. ಇದಕ್ಕೆ ಕಾರಣವುಂಟು. ಮೂಲತಃ ಜೀವಿಗಳು ಆನಂದದಿಂದಲೇ ಜನಿಸಿದ್ದೇ ಕಾರಣ. ಉಪನಿಷತ್ ವಾಕ್ಯವು ಇದನ್ನೇ ಹೇಳುತ್ತದೆ. ಈ ಕಾರಣದಿಂದ ಈ ಬಯಕೆ ಸಹಜವಾಗಿರುತ್ತದೆ. ನಮ್ಮ ಪ್ರಕಾರ ಆನಂದ ನಿಷ್ಠೆಯಿಂದ ಸಿಗುತ್ತದೆ ಎಂದರು.

ಆನಂದಕ್ಕೆ ಬೇರೆ ಬೇರೆ ಸಾಧನೆಗಳನು ಇವೆ ಎಂದು ಹೇಳಬಹುದಾದ ಉದಾಹರಣೆ ನೀಡುವವರು ಇದ್ದಾರೆ. ಒಳ್ಳೆಯ ತಿಂಡಿ, ಪ್ರವಾಸ, ಸಿನಿಮಾ ಎಂದು ನೀವೂ ಹೇಳಬಹುದು. ಆದರೆ, ನಮ್ಮ ಆಲೋಚನೆ ಅದಲ್ಲ. ನಿಷ್ಠೆಯಿಂದ ಆನಂದ ಸಿಗುತ್ತದೆ. ಆ ನಿಷ್ಠೆಯಿದ ಅಂತರಂಗದ ಆನಂದ ಸಾಧ್ಯವಾಗುತ್ತದೆ ಎಂದರು.

ಕರ್ಮಯೋಗಿಯು ಕರ್ಮವನ್ನು ಭಗವಂತನಿಗೆ ಸಮರ್ಪಣೆ ಮಾಡುತ್ತಾನೆ. ಅದರಿಂದ ಕರ್ಮದ ಫಲಗಳನ್ನು ಭಗವಂತನಿಗೆ ಸಮರ್ಪಣೆ ಮಾಡಿದವನಿಗೆ ಆನಂದ ಆಗುತ್ತದೆ. ಭಗವಂತನೂ ಇದನ್ನೇ ಹೇಳಿದ್ದಾನೆ. ಧರ್ಮ ನಿಷ್ಠೆ, ಕರ್ತವ್ಯ ನಿಷ್ಠೆ, ಧ್ಯೇಯ ನಿಷ್ಠೆ, ಬ್ರಹ್ಮ ನಿಷ್ಠೆಯಿಂದ ನಿಜವಾದ ಆನಂದ ಆಗುತ್ತದೆ. ಇದು ಗಟ್ಟಿಯಾಗಿ ನಿಲ್ಲುವ ಆನಂದ ಎಂದು ವಿವರಿಸಿದರು.

ಶ್ರೀಕಾಂತ ಹೆಗಡೆ ದುಗ್ಗುಮನೆ, ಸುದರ್ಶನ ಹೇಮಾದ್ರಿ ಹುಬ್ಬಳ್ಳಿ, ಅಶೋಕ ಭಟ್ಟ ಹುಬ್ಬಳ್ಳಿ, ಎಸ್.ಆರ್. ಹೆಗಡೆ ದಾವಣಗೆರ, ಸತೀಶ್ಚಂದ್ರ ಹೆಗಡೆ ದಾವಣಗೆರೆ, ಭಾಸ್ಕರ ಭಟ್ಟ ದಾವಣಗೆರೆ, ಸುಬ್ರಹ್ಮಣ್ಯ ಭಟ್ಟ ಬೆಳಗಾವಿ, ಪರಮೇಶ್ವರ ಹೆಗಡೆ ಬೆಳಗಾವಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net