ಮಠಗಳ ಸಂಸ್ಕಾರದಿಂದ ಉನ್ನತ ಸ್ಥಾನ ಪ್ರಾಪ್ತಿ

5 sgn 1
Published on

ಶಿಗ್ಗಾಂವಿ:  ಬದುಕಿನಲ್ಲಿ ಪಾಠ ಕಲಿಸಿದ ಬಡತನ ಹಾಗೂ ಮಠಗಳ ಸಂಸ್ಕಾರದ ಪರಿಣಾಮ ಉನ್ನತ ಸ್ಥಾನ ಅಲಂಕರಿಸಲು ಸಾಧ್ಯವಾಯಿತು. ಬಾಲ್ಯದ ದಿನಗಳಲ್ಲಿ ದನ ಮೇಯಿಸಿದ ಹುಲ್ಲುಗಾವಲು ಪ್ರದೇಶದಲ್ಲಿ ಕಮಾಂಡೆಂಟ್ ಆಗಿ ಅಧಿಕಾರ ಸ್ವೀಕರಿಸಿರುವುದು ಬದುಕಿನ ಧನ್ಯತೆಯ ಮತ್ತೊಂದು ಕ್ಷಣ ಎಂದು ಗಂಗೀಭಾವಿಯ ಕೆ.ಎಸ್.ಆರ್.ಪಿ 10ನೇ ಪಡೆಯ ಕಮಾಂಡೆಂಟ್ ಎನ್.ಬಿ. ಮೆಳ್ಳೆಗಟ್ಟಿ ಹೇಳಿದರು.

ಪಟ್ಟಣದ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಶನಿವಾರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು ಪದವಿ ಕಾಲೇಜು ಅಧ್ಯಯನ ಮಾಡುವಾಗ ಸಂಕಷ್ಟದ ದಿನಗಳು ನನ್ನ ಪಾಲಿಗಿದ್ದವು. ಆಗ ಬೆರಳೆಣಿಕೆಯ ಸಂಖ್ಯೆಯಲ್ಲಿ ಸಹಪಾಠಿಗಳಿದ್ದರು. ಉಪನ್ಯಾಸಕರ ಮಾರ್ಗದರ್ಶನ ಹಾಗೂ ಬದುಕು ಕಟ್ಟಿಕೊಳ್ಳುವ ಛಲ ಅಧ್ಯಯನಶೀಲವಾಗಲು ಕಾರಣವಾಯಿತು. ನಾನು ಅಧ್ಯಯನ ಮಾಡಿದ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಸನ್ಮಾನ ಸ್ವೀಕರಿಸಿರುವುದು ನನ್ನ ಶ್ರಮ ಹಾಗೂ ಸಾಧನೆಗೆ ಸಂದ ಗೌರವ ಎಂದರು.

ಕಾಲೇಜಿನ ಶೈಕ್ಷಣಿಕ ಕಾರ್ಯದರ್ಶಿ ಪ್ರೊ.ಪಿ.ಸಿ. ಹಿರೇಮಠ ಮಾತನಾಡಿ, 1990ರ ದಶಕದಲ್ಲಿ ಮೂಲ ಸೌಕರ್ಯಗಳ ಕೊರತೆಯ ಮಧ್ಯೆಯೂ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳು ಸಾಧನೆಯತ್ತ ಸಾಗಿದಾಗ ಗುರುವಿಗೆ ಅದಕ್ಕಿಂತ ಸಂಭ್ರಮ ಮತ್ತೊಂದಿಲ್ಲ. ಕಮಾಂಡೆಂಟ್ ಎನ್.ಬಿ.ಮೆಳ್ಳೆಗಟ್ಟಿ ಶಿಸ್ತಿನ ಬದುಕು ರೂಪಿಸಿಕೊಂಡ ಹಿನ್ನೆಲೆಯಲ್ಲಿ ಉನ್ನತ ಸ್ಥಾನ ಅಲಂಕರಿಸಲು ಸಾಧ್ಯವಾಗಿದೆ ಎಂದರು.

ಪ್ರಾಚಾರ್ಯ ಡಾ.ಬಾಲಚಂದ್ರ ತೊಂಡಿಹಾಳ, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಕರಡಿ ಮಾತನಾಡಿದರು. ನಾಗರಾಜ ಬ್ರಹ್ಮಾವರ, ಪರಿಮಳಾ ಜೈನ್, ಎಸ್.ವಿ. ಕುಲಕರ್ಣಿ, ವೀರೇಂದ್ರ ಕುಂದಾಪುರ, ಲಿಂಗರಾಜ ಕುನ್ನೂರ, ಗುರು ಅಂಗಡಿ, ಹನುಮಂತಪ್ಪ ಬೆಂಗೇರಿ, ಜಿಶಾನಖಾನ್ ಪಠಾಣ, ರಾಜು ಕೆಂಭಾವಿ, ಸುರೇಶ ಯಲಿಗಾರ ಹಾಗೂ ಉಪನ್ಯಾಸಕ ವಿನಯ್ ಎಚ್.ಕೆ. ಉಪಸ್ಥಿತರಿದ್ದರು. ಗೂಳಪ್ಪ ಅರಳಿಕಟ್ಟಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net