

ಕಲಘಟಗಿ: ಜೀವನದಲ್ಲಿ ನಾವು ಮಾಡಿರುವ ದಾನ, ಧರ್ಮದಿಗಳಂತಹ ಸತ್ಕಾರ್ಯಗಳಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಶಿರಕೋಳದ ಶ್ರೀ ಗುರುಸಿದ್ಧೇಶ್ವರ ಶಿವಾಚಾರ್ಯರು ಹೇಳಿದರು.
ತಾಲೂಕಿನ ಧೂಳಿಕೊಪ್ಪ ಗ್ರಾಮದ ಶ್ರೀ ಗ್ರಾಮದೇವಿ ಜಾತ್ರಾ ಮಹೋತ್ಸವದ ಶನಿವಾರ ಜರುಗಿದ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಬದುಕೆಂಬ ಬಂಗಾರದ ಬಂಡಿ ಉತ್ತಮವಾಗಿ ಚಲಿಸಬೇಕಾದರೆ ಚಕ್ರಗಳು ಅತೀ ಮುಖ್ಯ. ಅಂತಹ ಉತ್ತಮ ಚಕ್ರ ನೀವಾಗಬೇಕು. ಜಗನ್ಮಾತೆಯ ಜಾತ್ರೆಯಲ್ಲಿ ಪಾಲ್ಗೊಂಡು ಗುರುಗಳ ಆಶೀರ್ವಚನ ಮತ್ತು ಪ್ರವಚನ ಆಲಿಸಬೇಕು ಎಂದರು.
ಪ್ರವಚನಕಾರ ಶಿವಕುಮಾರ ಶಾಸ್ತ್ರೀಗಳು ಮಾತನಾಡಿ, ಹೆಣ್ಣು ದೈವಿ ಸ್ವರೂಪಿ. ಅವಳನ್ನು ಭೂತಾಯಿಯಂತೆ ಸ್ಮರಿಸಿ, ಆರಾಧಿಸಿದರೆ ಅಂಥವರಿಗೆ ಸಮಾಜದಲ್ಲಿ ಉತ್ತಮ ಗೌರವಯುತ ಸ್ಥಾನವನ್ನು ಗ್ರಾಮದೇವಿ ಕರುಣಿಸುತ್ತಾಳೆ ಎಂದರು.
ಈ ವೇಳೆ ಸಂಗೀತಗಾರ ಸಂಗಮೇಶ ಆಲಮೇಲ್, ತಬಲಾ ಸೇವಕ ಪಂಚಾಕ್ಷರಿ ಯಲಬುರ್ಗಾ, ಗುರುಲಿಂಗಯ್ಯ ಚಿಕ್ಕಮಠ, ಚಂದ್ರಪ್ಪ ಉಳ್ಳಾಗಡ್ಡಿ, ರವಿ ಅಲ್ಲಾಪುರ, ಮಂಜುನಾಥ ಅಲ್ಲಾಪುರ, ಡಾ. ಎಂ.ಎಸ್. ಕಮ್ಮಾರ, ಎಂ.ಬಿ. ಕಾಂಬಳೆ, ಹರೀಶ ದೊಡ್ಡಮನಿ, ನಾಗಮ್ಮ ಹೂಗಾರ, ಗಿರಿಜಾ ಚುರುಮರಿಮಠ, ಇತರರಿದ್ದರು.