ಧರ್ಮ ಕಾರ್ಯದಿಂದ ಭಗವಂತನ ಸಾನ್ನಿಧ್ಯ ಪ್ರಾಪ್ತಿ

kmt Konalli
Published on

ಕುಮಟಾ: ಪಂಚೇಂದ್ರೀಯ ಸುಖ ತಾತ್ಕಾಲಿಕವಾಗಿದ್ದು, ಧರ್ಮದ ಕಾರ್ಯದಲ್ಲಿ ಮಾತ್ರ ಶಾಶ್ವತ ಸುಖವಿದೆ. ಮನುಷ್ಯನಿಗೆ ದೇವ ಋಣ, ಪಿತೃ ಋಣ, ಋಷಿ ಋಣ, ಭೂತ ಋಣ ಇದೆ. ಈ ಋಣ ಮುಕ್ತರಾಗಿ ಭಗವಂತನ ಸಾನ್ನಿಧ್ಯ ಪಡೆಯಲು ಧರ್ಮ ಕಾರ್ಯ ಮಾಡಬೇಕು. ಭಾರತೀಯ ಪರಂಪರೆಯಂತೆ ತ್ರಿಕರಣಪೂರ್ವಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಕನ್ಯಾಡಿ ರಾಕ್ಷೇತ್ರದ ಪೀಠಾಧೀಶ ಮಹಾಮಂಡಲೇಶ್ವರ ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ ಹೇಳಿದರು.

ತಾಲೂಕಿನ ಕೋನಳ್ಳಿಯ ವನದುರ್ಗಾ ದೇವಾಲಯದಲ್ಲಿ ನಡೆಯುತ್ತಿರುವ ಶ್ರೀಗಳ ಚಾತುರ್ವಸ್ಯದ ನಾಲ್ಕನೇ ದಿನವಾದ ಭಾನುವಾರ ಬಾಡ-ಗುಡೇಅಂಗಡಿ ಭಾಗದ ನಾಮಧಾರಿ ಭಕ್ತಕೂಟದಿಂದ ಪಾದಪೂಜೆ, ಗುರು ಸೇವೆ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು.

ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರತ್ನಾಕರ ನಾಯ್ಕ ಮಾರ್ಗದರ್ಶನದಲ್ಲಿ ಬಾಡ, ಗುಡೇಅಂಗಡಿ ಭಾಗದ ನಾಮಧಾರಿ ಸಮಾಜದವರು ಸರದಿಯಲ್ಲಿ ಹೊರೆಗಾಣಿಕೆಯಾಗಿ ಅಕ್ಕಿಮೂಟೆ, ತರಕಾರಿ, ಹಣ್ಣು ಸೇರಿದಂತೆ ದವಸಧಾನ್ಯಗಳ ಮೂಟೆಯನ್ನು ಹೊತ್ತುತಂದು ಗುರುಪಾದಕ್ಕೆ ಅರ್ಪಿಸಿದರು. ಬಳಿಕ ವಿವಿಧ ಸೇವಾ ಕಾರ್ಯಗಳಲ್ಲಿ ಬೆಳಗ್ಗೆಯಿಂದ ರಾತ್ರಿವರೆಗೂ ಎಲ್ಲಾ ರೀತಿಯ ಉತ್ಸಾಹದಿಂದ ಪಾಲ್ಗೊಂಡರು. ಈ ನಡುವೆ ಶ್ರೀ ಕಾಂಚಿಕಾಂಬಾ ಭಜನಾ ಮಂಡಳಿಯಿಂದ ಹರಿಸಿದ ಭಕ್ತಿಸುಧೆ ಗುರು ಹಾಗೂ ಭಕ್ತರನ್ನು ತಲೆದೂಗುವಂತೆ ಮಾಡಿತು. ಎಲ್ಲರಿಗೂ ಶ್ರೀಗಳು ಫಲಮಂತ್ರಾಕ್ಷತೆಯಿತ್ತು ಹರಸಿದರು.

ಬಾಡ-ಗುಡೇಅಂಗಡಿ ಭಾಗದ ಪ್ರಮುಖರಾದ ಪ್ರಕಾಶ ನಾಯ್ಕ, ಜನಾರ್ದನ ನಾಯ್ಕ, ಜಗನ್ನಾಥ ನಾಯ್ಕ, ಬಾಬು ನಾಯ್ಕ, ಈಶ್ವರ ನಾಯ್ಕ ಮಾಸ್ತರ, ನಾಗರಾಜ ನಾಯ್ಕ, ವಸಂತ ನಾಯ್ಕ, ಗಣೇಶ ನಾಯ್ಕ, ಮಾರುತಿ ನಾಯ್ಕ, ವಿದ್ಯಾಧೀಶ ನಾಯ್ಕ, ಮಂಜುನಾಥ ನಾಯ್ಕ, ಸಂದೀಪ ನಾಯ್ಕ, ಕೇಶವ ನಾಯ್ಕ, ಇತರರು ಇದ್ದರು.

ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ಆರ್. ನಾಯ್ಕ, ಚಾತುರ್ವಸ್ಯ ವ್ರತಾಚರಣೆ ಸಮಿತಿ ಅಧ್ಯಕ್ಷ ಎಚ್.ಆರ್. ನಾಯ್ಕ ಕೋನಳ್ಳಿ ಹಾಗೂ ಸಮಿತಿಯವರು ವ್ಯವಸ್ಥೆಗಳನ್ನು ಸುಸೂತ್ರವಾಗಿ ನಿರ್ವಹಿಸಿದರು. ಪ್ರಸಾದ ಭೋಜನದ ಬಳಿಕ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಯಕ್ಷಗಾನ ಪ್ರದರ್ಶನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net