

ಕಳಸ: ಪ್ರಪಂಚದಲ್ಲಿ ಭಗವಂತನ ಆರಾಧನೆ ಮಾಡುವ ಯೋಗ್ಯತೆ, ಶಕ್ತಿ ಎಲ್ಲರಿಗೂ ಇದೆ. ಆದರೆ ಅವರವರ ಯೋಗ್ಯವಾದಂತ ಮಾರ್ಗದಲ್ಲಿ ಹಿರಿಯರಿಂದ ತಿಳಿದು ಕೊಂಡು ಭಗವಂತನ ಆರಾಧನೆ ಮಾಡಿದಾಗ ಭಗವಂತನ ಅನುಗ್ರಹ ಎಲ್ಲರಿಗೂ ಪ್ರಾಪ್ತವಾಗುತ್ತದೆ ಎಂದು ಶೃಂಗೇರಿ ಜಗದ್ಗುರು ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.
ಕಳಸ ಕಲಶೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಡೆದ ವಿವಿಧ ಕಾಮಗಾರಿಗಳ ಸಮರ್ಪಣೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಲ್ಲಿ ಭಾಗವಹಿಸಿ ಆಶೀರ್ವಚನ ನೀಡಿ, ನಾವು ಯೋಗ್ಯ ಮಾರ್ಗದಲ್ಲಿ ಶುದ್ಧ ಮನಸ್ಸಿನಿಂದ, ಭಕ್ತಿಯಿಂದ ಭಗವಂತನನ್ನು ಆಶ್ರಯಿಸಿದಾಗ ಭಗವಂತನ ಅನುಗ್ರಹ ನಮಗೆ ಪ್ರಾಪ್ತವಾಗುತ್ತದೆ. ಈ ರೀತಿಯಾಗಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗಿ ನಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನ ದೇವಸ್ಥಾನದಲ್ಲಿ ಏಕಾದಶವಾರು ರುದ್ರ ಹೋಮದ ಪೂರ್ಣಾಹುತಿ, ಮತ್ತು ಶ್ರೀಕಲಶೇಶ್ವರ ಸ್ವಾಮಿಗೆ ನವ ಕಲಾಶಾಭಿಷಿಕ ಹಾಗೂ ಕಳಸ ರುದ್ರಪಾದ ಶಾಂತಲಾ ಮತ್ತು ಜಯಕುಮಾರ್ ಭಟ್ ಅವರು ಕಲಶೇಶ್ವರ ದೇವಸ್ಥಾನಕ್ಕೆ ಕೊಡುಗೆಯಾಗಿ ನೀಡಿದ ದೇವಸ್ಥಾನದ ಚಂದ್ರಶಾಲೆಗೆ ಮತ್ತು ಗರ್ಭಗುಡಿ ಮಧ್ಯೆ ಕಬ್ಬಿಣದ ಮೇಲ್ಛಾವಣಿ, ಚಂದ್ರಶಾಲೆ ಸುತ್ತ ಗ್ರಾನೈಟ್ ನೆಲಹಾಸು ಅಳವಡಿಕೆ, ಆನೆ ದೇವರ ಸುತ್ತ ಗ್ರಾನೈಟ್ ನೆಲಹಾಸು ಮತ್ತು ಮೇಲ್ಛಾವಣಿ, ಕ್ಷೇತ್ರಪಾಲ ದೇವರಿಗೆ ಮೇಲ್ಛಾವಣಿ, ದೇವಸ್ಥಾನದ ಮೆಟ್ಟಿಲಿಗೆ ಸ್ಟೀಲಿನ ಕೈಪಿಡಿ, ಅಡುಗೆ ಮನೆ ಹಿಂಭಾಗದಲ್ಲಿ ನೆಲಕ್ಕೆ ಸಂಪೂರ್ಣ ಗ್ರಾನೈಟ್ ಅಳವಡಿಕೆಯ ಕಾಮಗಾರಿಯನ್ನು ಜಗದ್ಗುರು ವಿಧುಶೇಖರಭಾರತೀ ಮಹಾ ಸ್ವಾಮೀಜಿಗಳ ದಿವ್ಯ ಹಸ್ತದಿಂದ ಸಮರ್ಪಣೆ ಮಾಡಿದರು.
ಕಲಶೇಶ್ವರ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೆಂಕಟಸುಬ್ಬಯ್ಯ, ಸದಸ್ಯರಾದ ಬಾಲಕೃಷ್ಣ ಭಟ್, ರಂಗನಾಥ್, ಕಾರ್ತಿಕ್ ಶಾಸಿ, ಸತೀಶ್ ಕಲ್ಲಾನೆ, ದೇವಸ್ಥಾನದ ಕಾರ್ಯನಿರ್ವಹಕ ಅಧಿಕಾರಿ ಎಸ್.ಪ್ರೇಮಲತಾ, ಅ.ರಾ.ಸತೀಶ್ಚಂದ್ರ ಇದ್ದರು.