ಪ್ರಾರ್ಥನೆಯಿಂದ ಧೈವ ಸಾನ್ನಿಧ್ಯ ಪ್ರಾಪ್ತಿ

ಅರಸೀಕೆರೆಯ ಲಕ್ಷ್ಮೀಪುರ ಬಡಾವಣೆಯಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ, ಸಮುದಾಯ ಭವನದ ನೆಲ ಮಹಡಿ ಲೋಕಾರ್ಪಣೆ ಹಾಗೂ ಎಸ್ಸೆಸ್ಸೆಲ್ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು. ಶಂಕರಾತ್ಮಾನಂದ ಸ್ವಾಮೀಜಿ, ತಹಸೀಲ್ದಾರ್ ಎಂ.ಜಿ. ಸಂತೋಷ್ ಕುಮಾರ್, ಸಮೀವುಲ್ಲಾ, ಅರುಣ್ ಕುಮಾರ್, ಯೋಗೇಶಾಚಾರ್ ಇತರರು ಇದ್ದರು.
ಅರಸೀಕೆರೆಯ ಲಕ್ಷ್ಮೀಪುರ ಬಡಾವಣೆಯಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ, ಸಮುದಾಯ ಭವನದ ನೆಲ ಮಹಡಿ ಲೋಕಾರ್ಪಣೆ ಹಾಗೂ ಎಸ್ಸೆಸ್ಸೆಲ್ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು. ಶಂಕರಾತ್ಮಾನಂದ ಸ್ವಾಮೀಜಿ, ತಹಸೀಲ್ದಾರ್ ಎಂ.ಜಿ. ಸಂತೋಷ್ ಕುಮಾರ್, ಸಮೀವುಲ್ಲಾ, ಅರುಣ್ ಕುಮಾರ್, ಯೋಗೇಶಾಚಾರ್ ಇತರರು ಇದ್ದರು.
Published on

ಅರಸೀಕೆರೆ: ನಿರಾಕಾರ ಪರಮಾತ್ಮನ ಪೂಜೆಯಿಂದ ಮಾತ್ರವೇ ಮನಸ್ಸಿಗೆ ನೆಮ್ಮದಿ ಲಭಿಸಲಿದೆ ಎಂದು ಅರಕಲಗೂಡು ತಾಲೂಕಿನ ಅರೇಮಾದನಹಳ್ಳಿ ವಿಶ್ವ ಬ್ರಾಹ್ಮಣ ಪೀಠದ ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಹೇಳಿದರು.

ನಗರದ ಲಕ್ಷ್ಮೀಪುರ ಬಡಾವಣೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ, ಸಮುದಾಯ ಭವನದ ನೆಲ ಮಹಡಿ ಲೋಕಾರ್ಪಣೆ ಹಾಗೂ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಶತಮಾನಗಳ ಇತಿಹಾಸ ಹೊಂದಿರುವ ವಿಶ್ವಕರ್ಮ ಸಮುದಾಯವು ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ. ಕಮ್ಮಾರಿಕೆ, ಮರಗೆಲಸ, ಚಿನ್ನಾಭರಣ ತಯಾರಿಕೆ, ಶಿಲ್ಪಗಳ ಕೆತ್ತನೆ ಹಾಗೂ ಕಂಚಿನ ಕೆಲಸ ಒಳಗೊಂಡಂತೆ ಪಂಚ ವೃತ್ತಿಯಲ್ಲಿ ವಿಶ್ವಕರ್ಮ ಸಮುದಾಯಕ್ಕೆ ಸೇರಿದ ಜನರು ತೊಡಗಿಸಿಕೊಂಡಿದ್ದಾರೆ. ಮಂದಿರ, ಮಸೀದಿ, ಚರ್ಚ್, ಬೌದ್ಧ ವಿಹಾರಗಳನ್ನು ಕಟ್ಟಿದ ಕೀರ್ತಿ ಹೊಂದಿದೆ. ಹೊಯ್ಸಳರ ಕಾಲದಲ್ಲಿ ಅದ್ಭುತ ದೇಗುಲ ನಿರ್ಮಿಸಿದ ಅಮರ ಶಿಲ್ಪಿ ಜಕಣಾಚಾರಿಯಿಂದ ಅಯೋಧ್ಯೆ ಶ್ರೀರಾಮನ ಮೂರ್ತಿ ಕೆತ್ತನೆವರೆಗೆ ಅಪರೂಪದ ಕಲಾಕೃತಿಗಳು ಒಡಮೂಡಿರುವುದು ಸಾಮಾನ್ಯ ಸಂಗತಿಯಲ್ಲ. ನಿರಾಕಾರ ಭಗವಂತನ ಪ್ರಾರ್ಥನೆಯಿಂದ ಧೈವ ಸಾನ್ನಿಧ್ಯ ಪಡೆಯಬಹುದು ಎನ್ನುವ ಸತ್ಯ ತಿಳಿದು ಪರಿಪೂರ್ಣ ಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರು.

ಕರ್ನಾಟಕ ಗೃಹಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ನನ್ನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಎಲ್ಲ ಸಮುದಾಯಗಳಿಗೆ ನಗರದ ಆಯಕಟ್ಟಿನ ಜಾಗದಲ್ಲಿ ನಿವೇಶನ ಕೊಡಿಸುವ ಜತೆಗೆ ಸುಸಜ್ಜಿತ ಭವನ ಕಟ್ಟಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ರಾಜಕೀಯ ಟೀಕೆ, ಟಿಪ್ಪಣಿಗಳ ನಡುವೆ ಕುಡಿಯುವ ನೀರು, ರಸ್ತೆ, ಶಿಕ್ಷಣ ಒಳಗೊಂಡಂತೆ ಎಲ್ಲ ರೀತಿಯ ಅಗತ್ಯ ಮೂಲಸೌಕರ್ಯ ಒದಗಿಸಲಾಗಿದೆ.ವಿಶ್ವಕರ್ಮ ಸಮುದಾಯ ಭವನ ಪೂರ್ಣಗೊಳಿಸಲು ಸಂಪೂರ್ಣ ಸಹಕಾರ ನೀಡಲಿದ್ದೇನೆ ಎಂದು ಭರವಸೆ ನೀಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಟ್ರೋ ಬಾಬು ಮಾತನಾಡಿ, ಊಹಿಸಲು ಅಸಾಧ್ಯವಾದ ಶಿಲ್ಪಕಲಾ ಕೆತ್ತನೆ ಮೂಲಕ ಜನರನ್ನು ಬೆರಗುಗೊಳಿಸುವ ಕೆಲಸ ವಿಶ್ವಕರ್ಮ ಸಮುದಾಯ ನಿರಂತರವಾಗಿ ಮುನ್ನಡೆಸಿಕೊಂಡು ಬಂದಿದೆ. ಮಥುರಾ, ಅಯೋಧ್ಯೆ, ಸ್ವರ್ಗದ ಕಲ್ಪನೆ ಊಹಿಸಲು ಅಸಾಧ್ಯ ಕೊಡುಗೆ ಸಮುದಾಯದಿಂದ ನಡೆದಿದೆ ಎಂದು ಬಣ್ಣಿಸಿದರು.

ಚನ್ನಗಿರಿ ತಾಲೂಕಿನ ವಡ್ನಾಳು ವಿಶ್ವಕರ್ಮ ಮಹಾ ಸಂಸ್ಥಾನದ ಸಾವಿತ್ರಿ ಪೀಠ ಕಾಶೀಮಠದ ಶ್ರೀ ಶಂಕರಾತ್ಮಾನಂದ ಸ್ವಾಮೀಜಿ, ತಹಸೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್, ನಗರಸಭೆ ಅಧ್ಯಕ್ಷ ಸಮೀವುಲ್ಲಾ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅರುಣ್ ಕುಮಾರ್, ವಿಶ್ವಕರ್ಮ ಸಮುದಾಯದ ತಾಲೂಕು ಅಧ್ಯಕ್ಷ ಯೋಗೇಶಾಚಾರ್ ಮಾತನಾಡಿದರು. ಗ್ರೇಡ್ 2 ತಹಸೀಲ್ದಾರ್ ಪಾಲಾಕ್ಷ, ಮುಖಂಡರಾದ ಜಿ.ಕುಮಾರ್ , ಹರೀಶ್, ತಿಮ್ಮಾಚಾರ್, ಮುಂಜುನಾಥ್ ರಾಯ್ಕರ್, ನೇವರ್ತಿರಾವ್ ಜಾಧವ್, ದೇವರಾಜ್, ವಸಂತ ಕುಮಾರ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net