ಇ.ಡಿ, ಸಿಬಿಐ ದಾಳಿ ಮಾಡಿಸುವುದು ಕೇಂದ್ರಕ್ಕೆ ಚಟ

madhu
ಶಿವಮೊಗ್ಗ ಉಪವಿಭಾಗಾಧಿಕಾರಿ ಕಚೇರಿ ಕಟ್ಟಡದಲ್ಲಿನ ವಿಧಾನ ಪರಿಷತ್ ನೂತನ ಸದಸ್ಯೆ ಬಲ್ಕಿಷ್ ಬಾನು ಅವರ ಕಚೇರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು. ಬಲ್ಕಿಷ್ ಬಾನು, ಆರ್.ಪ್ರಸನ್ನಕುಮಾರ್, ಆಯನೂರು ಮಂಜುನಾಥ್ ಇತರರಿದ್ದರು.
Published on

ಶಿವಮೊಗ್ಗ: ಇ.ಡಿ, ಸಿಬಿಐ ದಾಳಿ ಮಾಡಿಸುವುದು ಕೇಂದ್ರ ಸರ್ಕಾರಕ್ಕೆ ಚಟವಾಗಿದೆ. ಆದರೆ ದಾಳಿ ನಡೆಸಬೇಡಿ ಎಂದು ಯಾರಿಗೂ ಹೇಳಲು ಸಾಧ್ಯವಿಲ್ಲ. ಆದರೆ ಅದರ ಹಿಂದೆ ಯಾವುದೇ ಹಿತಾಸಕ್ತಿ ಇರಬಾರದು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮಾಜಿ ಸಚಿವ ಬಿ.ನಾಗೇಂದ್ರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಕಾನೂನುಬದ್ಧವಾಗಿ ನಡೆಯುವ ಪ್ರಕ್ರಿಯೆಗೆ ಸ್ವಾಗತವಿದೆ ಎಂದರು.
ಈ ಹಿಂದೆ ಕೇಂದ್ರ ಸರ್ಕಾರ ಸ್ವಾಯತ್ತ ಸಂಸ್ಥೆಗಳನ್ನು ಸ್ವಾರ್ಥಕ್ಕೆ ಬಳಸಿಕೊಂಡ ನಿದರ್ಶನಗಳಿವೆ. ಆದರೆ ಈಗ ಕೇಂದ್ರದಲ್ಲಿರುವುದು ಮೈತ್ರಿ ಸರ್ಕಾರ. ಏಕಾಏಕಿ ಬಿಜೆಪಿ ಎಲ್ಲವನ್ನೂ ನಿರ್ಣಯಿಸುವುದು ಸಾಧ್ಯವಿಲ್ಲ. ಮಿತ್ರಪಕ್ಷಗಳು ಅಂಕುಶ ಹಾಕುತ್ತವೆ. ಕಾನೂನು ದುರ್ಬಳಕೆ ಆಗಬಾರದು ಎಂಬುದು ನನ್ನ ಆಗ್ರಹ ಎಂದು ತಿಳಿಸಿದರು.
ವರ್ಗಾವಣೆಯನ್ನು ದಂಧೆ ಎಂದು ಕರೆದಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಬಸವರಾಜ ರಾಯರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಯರೆಡ್ಡಿ ಯಾವುದೇ ನಿರ್ದಿಷ್ಟ ಪ್ರಕರಣ ಉದ್ದೇಶಿಸಿ ಈ ಮಾತುಗಳನ್ನು ಹೇಳಿಲ್ಲ. ವರ್ಗಾವಣೆ ಪಾರದರ್ಶಕವಾಗಿರಲಿ ಎಂಬರ್ಥದಲ್ಲಿ ಮಾತನಾಡಿದ್ದಾರೆ ಎಂದು ಸಮಜಾಯಿಷಿ ನೀಡಿದರು.
ಮುಡಾದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪತ್ನಿಗೆ ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ಬಿಜೆಪಿ ನಾಯಕರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಅದು ಅವರ ಹಕ್ಕು. ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದ್ದು, ಸತ್ಯಾಂಶ ಹೊರಬರಲಿದೆ ಎಂದು ತಿಳಿಸಿದರು.
ಶಿವಮೊಗ್ಗದಲ್ಲಿನ ಗೋವಿಂದಾಪುರ, ಗೋಪಶೆಟ್ಟಿಕೊಪ್ಪದ ಆಶ್ರಯ ಸಮಿತಿ ಮನೆಗಳನ್ನು ಪೂರ್ಣಗೊಳಿಸಿ ಹಸ್ತಾಂತರಿಸುವಂತೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದ್ದು, ವಸತಿ ಸಚಿವ ಜಮೀರ್ ಅಹಮದ್ ಅವರೊಂದಿಗೆ ಚರ್ಚಿಸುತ್ತೇನೆ. ಯಾವ ಹಂತದಲ್ಲಿ ಏನು ಕೆಲಸ ಮಾಡಬೇಕು ಎಂಬುದನ್ನು ಗಮನಿಸುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net