

ಶಿವಮೊಗ್ಗ: ಟಿಪ್ಪುನಗರದಲ್ಲಿ ಮಾಂಸಕ್ಕಿಂತ ಮೂಳೆಗಳೇ ಜಾಸ್ತಿಯಿದೆ ಎಂದು ದೂರಿದ ಗ್ರಾಹಕನ ಮೇಲೆ ಮಾಂಸದಂಗಡಿಯಲ್ಲಿದ್ದ ಅಪ್ರಾಪ್ತ ಸೋಮವಾರ ಬೆಳಗ್ಗೆ ಮಚ್ಚಿನಿಂದ ದಾಳಿ ನಡೆಸಿ ಗಾಯಗೊಳಿಸಿದ್ದು, ಅಪ್ರಾಪ್ತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗಾಡಿಕೊಪ್ಪದ ಮಲ್ಲೇಶ್ (40) ಹಲ್ಲೆಗೊಳಗಾದ ಗ್ರಾಹಕ. ಮಲ್ಲೇಶ್ ಅವರು ಟಿಪ್ಪುನಗರದ ಮಾಂಸದಂಗಡಿಯಲ್ಲಿ ಮಾಂಸ ಖರೀದಿಗೆ ಬಂದಿದ್ದರು. ಈ ವೇಳೆ ಪ್ಯಾಕ್ ಮಾಡಿಕೊಟ್ಟ ಮಾಂಸದಲ್ಲಿ ಮೂಳೆಗಳೇ ಹೆಚ್ಚಿರುವುದು ಕಂಡುಬಂದಿದೆ. ಈ ಬಗ್ಗೆ ಮಲ್ಲೇಶ್, ಆರೋಪಿ ತಂದೆಗೆ ಫೋನ್ ಮಾಡಿ ದೂರಿದ್ದರು.
ಇದರಿಂದ ಆಕ್ರೋಶಗೊಂಡ ಅಪ್ರಾಪ್ತ ಅಂಗಡಿಯಲ್ಲಿದ್ದ ಮಚ್ಚಿನಿಂದ ಗ್ರಾಹಕನ ಕುತ್ತಿಗೆಗೆ ದಾಳಿ ನಡೆಸಿದ್ದಾನೆ. ಗಾಯಾಳು ಮಲ್ಲೇಶ್ ಅವರನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.