ಬಸ್ ಚಾಲಕನ ಮೇಲೆ ಹಲ್ಲೆ

New Project (52)
Published on

ಉಪ್ಪಿನಂಗಡಿ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ರಾಜಹಂಸ ಬಸ್ ಚಾಲಕ ಹಾರ್ನ್ ಹಾಕಿದ ಎಂಬ ಕಾರಣಕ್ಕೆ ಬೈಕ್ ಸವಾರರಿಬ್ಬರು ಬಸ್ಸನ್ನು ಅಡ್ಡ ಹಾಕಿ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದು, ಅದನ್ನು ಪ್ರಶ್ನಿಸಿದ ಪ್ರಯಾಣಿಕನ ಮೇಲೂ ಹೆಲ್ಮೆಟ್‌ನಿಂದ ಹೊಡೆದು ಹಲ್ಲೆ ನಡೆಸಿದ ಘಟನೆ ಉಪ್ಪಿನಂಗಡಿಯಲ್ಲಿ ಬುಧವಾರ ನಡೆದಿದೆ.

ಬೆಂಗಳೂರಿನಿಂದ ಮಂಗಳೂರಿನತ್ತ ಸಂಚರಿಸುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ರಾಜಹಂಸ ಬಸ್ ಚಾಲಕ ರಿಯಾಝ್ ಅಹಮ್ಮದ್ ಎಂಬುವರು ಬಸ್‌ಗೆ ಅಡ್ಡವಾಗಿ ಸಂಚರಿಸುತ್ತಿದ್ದ ಬೈಕ್‌ಗೆ ದಾರಿ ಬಿಟ್ಟು ಕೊಡುವ ಸಲುವಾಗಿ ಹಾರ್ನ್ ಹಾಕಿದ್ದರು. ಇದರಿಂದ ಕೆರಳಿದ ಬೈಕ್ ಸವಾರರಿಬ್ಬರು ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ತಡೆಯಲು ಬಂದ ಬಸ್ ಪ್ರಯಾಣಿಕ ಅವಿನಾಶ್ ಮೇಲೂ ಹೆಲ್ಮೆಟ್‌ನಿಂದ ತಲೆಗೆ ಹೊಡೆದು ಗಂಭೀರ ಗಾಯಗೊಳಿಸಿದ್ದಾರೆ. ಈ ಬಗ್ಗೆ ಬಸ್ ಚಾಲಕ ಬೈಕ್ ನಂಬರ್ ಆಧರಿಸಿ ಪೊಲೀಸರಿಗೆ ದೂರು ನೀಡಿದ್ದರು.

ಸಂಜೆ 3.30ಕ್ಕೆ ನಡೆದ ಈ ಘಟನೆ ಬಗ್ಗೆ ದೂರು ಸ್ವೀಕರಿಸಿದ ಉಪ್ಪಿನಂಗಡಿ ಠಾಣಾ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಗುರುನಾಥ್ ಹಾದಿಮನಿ ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದರು. ಬಂಧಿತ ಆರೋಪಿಗಳನ್ನು ಉಪ್ಪಿನಂಗಡಿ ಗ್ರಾಮದ ಮಠ ನಿವಾಸಿ ಜುನೈದ್(24), ಹಿಷಾಮ್(18) ಎಂದು ಗುರುತಿಸಲಾಗಿದೆ. ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net