ಗೋದಾಮಿನಲ್ಲಿ 180 ಕ್ಷೀರಭಾಗ್ಯದ ಪ್ಯಾಕೆಟ್ ಪತ್ತೆ

22 GJD 3
Published on

ಗಜೇಂದ್ರಗಡ: ಅನ್ನಭಾಗ್ಯದ ಅಕ್ಕಿ ಅಕ್ರಮ ಸಂಗ್ರಹ, ಸಾಗಾಟ ಮಾಡುತ್ತಿದ್ದ ದಂಧೆಕೋರರ ಕಣ್ಣು ಈಗ ಶಾಲಾಮಕ್ಕಳಿಗೆ ಮೀಸಲಾದ ಕ್ಷೀರಭಾಗ್ಯ ಯೋಜನೆಯ ಹಾಲಿನ ಪುಡಿ ಮೇಲೆ ಬಿದ್ದಿದೆ.

ಗಜೇಂದ್ರಗಡ ಪೊಲೀಸರು, ಆಹಾರ ಇಲಾಖೆ ಅಧಿಕಾರಿಗಳು ಗುರುವಾರ ರಾತ್ರಿ ಎಪಿಎಂಸಿ ಗೋದಾಮಿನಲ್ಲಿ ಅಕ್ರಮವಾಗಿ ಅಕ್ಕಿ ಸಂಗ್ರಹಿಸಿರುವ ಸಂಶಯದ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಿದಾಗ ಒಂದು ಕೆ.ಜಿ ತೂಕದ 180 ಪ್ಯಾಕೆಟ್ ಹಾಲಿನ ಪುಡಿ ಪತ್ತೆಯಾಗಿವೆ. ಅನ್ನಭಾಗ್ಯದ ಅಕ್ಕಿಯನ್ನೇ ಹೋಲುವ 26.5 ಕ್ವಿಂಟಾಲ್ ಅಕ್ಕಿಯೂ ಪತ್ತೆಯಾಗಿದೆ.

‘ದಾಳಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸೇರಿದ ಒಂದು ಕೆ.ಜಿ ತೂಕದ ಹಾಲಿನ ಪುಡಿಯ ಒಟ್ಟು 180 ಪ್ಯಾಕೆಟ್‌ಗಳು ಸಿಕ್ಕಿವೆ. ಪ್ಯಾಕೆಟ್ ಮೇಲೆ ಬ್ಯಾಚ್ ನಂಬರ್ ಬರೆಯಲಾಗಿದೆ. ಗಜೇಂದ್ರಗಡಕ್ಕೆ ನೆರೆಯ ಜಿಲ್ಲೆಯ ತಾಲೂಕುಗಳ ಹಳ್ಳಿಗಳು ಸಮೀಪ ಇರುವುದರಿಂದ ಇಂಥ ಅಕ್ರಮಗಳು ನಡೆಯುತ್ತಿರುವ ಶಂಕೆ ವ್ಯಕ್ತವಾಗಿದೆ. ಎಲ್ಲ ಪ್ಯಾಕೆಟ್‌ಗಳ ಬ್ಯಾಚ್ ನಂಬರ್ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ತಾಲೂಕು ಅಕ್ಷರ ದಾಸೋಹ ಅಧಿಕಾರಿ ಬಸವರಾಜ ಅಂಗಡಿ ತಿಳಿಸಿದ್ದಾರೆ.

ಗಜೇಂದ್ರಗಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಲೂಕಿನಲ್ಲಿ ಅನ್ನಭಾಗ್ಯ ಅಕ್ಕಿಯ ಸಂಗ್ರಹ ಹಾಗೂ ಸಾಗಾಟ ನಡೆಯುತ್ತಿದ್ದರೂ ತಾಲೂಕಿನ ಅಧಿಕಾರಿಗಳು ದಂಧೆಕೋರರನ್ನು ನಿಯಂತ್ರಿಸಲು ಆಗುತ್ತಿಲ್ಲ. ತಾಲೂಕಿನಲ್ಲಿ ಪದೇಪದೆ ಅನ್ನಭಾಗ್ಯ ಅಕ್ಕಿ ದುರುಪಯೋಗ ತಡೆಗೆ ತಂಡ ರಚನೆ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net