

ಗುಂಡ್ಲುಪೇಟೆ : ಕುಡಿದ ಮತ್ತಿನಲ್ಲಿ ಕರ್ತವ್ಯನಿರತ ಕಾನ್ಸ್‌ಟೆಬಲ್ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ ಘಟನೆ ಗುರುವಾರ ರಾತ್ರಿ ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸ್ವಾಮಿ ಎಂಬುವರೇ ಗಾಯಗೊಂಡವರು. ಗುರುವಾರ ರಾತ್ರಿ ಕರ್ತವ್ಯದಲ್ಲಿದ್ದ ವೇಳೆ ಕೆ.ಎಸ್.ನಾಗರತ್ನಮ್ಮ ಬಡಾವಣೆ ನಿವಾಸಿ ಕೆಂಪರಾಜು ಎಂಬುವರು ತಮ್ಮ ಸಹೋದರ ಗೋಪಾಲ್ ಮನೆಯಲ್ಲಿ ತಮಗೆ, ಹೆಂಡತಿಗೆ ಹಲ್ಲೆ ಮಾಡುತ್ತಿದ್ದಾನೆ ಎಂದು ಠಾಣೆಗೆ ಬಂದು ದೂರು ನೀಡಿದರು.
ಈ ಬಗ್ಗೆ ದೂರು ಸ್ವೀಕರಿಸಿದ ಸಿಬ್ಬಂದಿ ಅಣ್ಣಾದೊರೈ ಎಂಬುವರು ರಾತ್ರಿ ಬೀಟ್‌ನಲ್ಲಿದ್ದ ಸ್ವಾಮಿಗೆ ಕರೆ ಮಾಡಿ ಅವರ ಮನೆಗೆ ಹೋಗಿ ಕೇಸ್ ಅಟೆಂಡ್ ಮಾಡುವಂತೆ ಸೂಚಿಸಿದರು. ಸ್ವಾಮಿ ಹೋಂಗಾರ್ಡ್ ಸಿಬ್ಬಂದಿ ಒಬ್ಬರ ಜತೆ
ಮನೆಗೆ ಹೋದ ಸಂದರ್ಭ ಪೊಲೀಸರ ಎದುರೇ ಗೋಪಾಲ್ ತನ್ನ ಅಣ್ಣನಿಗೆ ಚಪ್ಪಲಿಯಿಂದ ಹೊಡೆಯಲು ಯತ್ನಿಸಿದ. ತಡೆಯಲು ಮುಂದಾದ ಸ್ವಾಮಿ ಮತ್ತು ಹೋಂ ಗಾರ್ಡ್‌ಗೂ ಕುಡಿದ ಮತ್ತಿನಲ್ಲಿದ್ದ ಏಕಾಏಕಿ ಹಲ್ಲೆ ನಡೆಸಿದ. ಘಟನೆಯಲ್ಲಿ ಸ್ವಾಮಿ ಮೊಣಕೈ ಹಾಗೂ ಕಣ್ಣಿಗೆ ಗಾಯವಾಗಿದೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.