

ಕಾಸರಗೋಡು: ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಸಮರ್ಪಕ ನಂಬರ್‌ಪ್ಲೇಟ್ ಹೊಂದಿದ್ದ ಸ್ಕೂಟರ್ ವಶಕ್ಕೆ ಪಡೆಯುವ ಮಧ್ಯೆ ಎಸ್‌ಐ ಸೇರಿದಂತೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ತಂಡದ ಇಬ್ಬರನ್ನು ಬಂಧಿಸಿದ್ದಾರೆ.
ಕಳನಾಡು ಕೂವತ್ತೊಟ್ಟಿ ನಿವಾಸಿ ಜಾಶಿರ್, ಚೆಂಗಳ ನಾಲ್ಕನೇ ಮೈಲಿ ನಿವಾಸಿ ಜಿ.ಎ.ಅಸಿಫ್, ಇನ್ನೊಬ್ಬ ಆರೋಪಿ ಕಲಂದರ್ ಆಲಿ ಎಂಬಾತ ತಲೆಮರೆಸಿಕೊಂಡಿದ್ದಾನೆ. ಮೇಲ್ಪರಂಬ ಠಾಣೆ ಎಸ್‌ಐ ಎ.ಎನ್.ಸುರೇಶ್‌ಕುಮಾರ್ ನೇತೃತ್ವದ ಪೊಲೀಸರ ತಂಡ ವಾಹನ ತಪಾಸಣೆ ಮಧ್ಯೆ ಆಗಮಿಸಿದ ಸ್ಕೂಟರ್‌ನ ನಂಬರ್ ಅಸಮರ್ಪಕವಾಗಿರುವುದನ್ನು ಗಮನಿಸಿ ತಪಾಸಣೆ ನಡೆಸಿದಾಗ ವಿಮೆ, ಮಾಲಿನ್ಯ ಸರ್ಟಿಫಿಕೇಟ್ ನವೀಕರಿಸದಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ವಾಹನ ವಶಕ್ಕೆ ಪಡೆಯಲು ಮುಂದಾದಾಗ ತಂಡ ಪೊಲೀಸರನ್ನು ಬೆದರಿಸಿ ಹಲ್ಲೆಗೆ ಮುಂದಾಗಿತ್ತು. ತಕ್ಷಣ ಹೆಚ್ಚುವರಿ ಪೊಲೀಸರು ಸ್ಥಳಕ್ಕಾಗಮಿಸಿ ಸ್ಕೂಟರ್ ವಶಕ್ಕೆ ಪಡೆದು ತಂಡದ ಮೇಲೆ ಕೇಸು ದಾಖಲಿಸಿಕೊಂಡಿದ್ದರು.