ಕೊಣಾಜೆ ಗ್ರಾಪಂ ಮಾಜಿ ಸದಸ್ಯನ ಮೇಲೆ ತಲವಾರು ದಾಳಿ

crime
Published on

ಮಂಗಳೂರು: ಕೊಣಾಜೆ ಗ್ರಾಪಂ ಮಾಜಿ ಸದಸ್ಯ, ಬಿಜೆಪಿಯ ಪ್ರಮುಖ ಪ್ರಕಾಶ್‌ ಶೆಟ್ಟಿ (41) ಎನ್ನುವವರ ಮೇಲೆ ಸೋಮವಾರ ರಾತ್ರಿ ಯುವಕರ ತಂಡವೊಂದು ತಲವಾರು ದಾಳಿ ನಡೆಸಿ, ಹತ್ಯೆ ಮಾಡಲು ಯತ್ನಿಸಿದೆ. ಈ ವೇಳೆ ಸಮಯ ಪ್ರಜ್ಞೆ ಮೆರದ ಅವರು ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ.
ವಿಶ್ವವಿದ್ಯಾಲಯ ಆವರಣದ ಹಾಸ್ಟೆಲ್‌ ಬಳಿ ಫ್ಯಾನ್ಸಿ ಹಾಗೂ ಜನರಲ್‌ ಸ್ಟೋರ್‌ ಹೊಂದಿದ್ದ ಅವರು, ಸೋಮವಾರ ರಾತ್ರಿ 9.30ರ ವೇಳೆಗೆ ಅಂಗಡಿ ಮುಚ್ಚಿ ಮನೆ ಕಡೆಗೆ ಹೋಗುವಾಗ ಈ ಘಟನೆ ನಡೆದಿದೆ. ಅಂಗಡಿಯಿಂದ ಸ್ವಲ್ಪ ದೂರದಲ್ಲಿ ಕಪ್ಪು ಬಣ್ಣದ ಪಲ್ಸರ್‌ನಲ್ಲಿ ಕುಳಿತಿದ್ದ ಮೂವರು ಯುವಕರನ್ನು ಪ್ರಕಾಶ್‌ ಮೊದಲೇ ಗಮನಿಸಿದ್ದರು. ಹಾಗಾಗಿ ಅಂಗಡಿ ಬಂದ್‌ ಮಾಡಿದ ಬಳಿಕ ಪರಿಚಯದ ಮಂಜುನಾಥ್‌ ಎನ್ನುವವರ ಜತೆ ಬೈಕ್‌ನಲ್ಲಿ ಹೊರಟಿದ್ದು, ಆಗ ಹಿಂದಿನಿಂದ ಬಂದ ಯುವಕರು ತಲವಾರು ಬೀಸಿದ್ದಾರೆ. ಈ ವೇಳೆ ಏಟು ತಪ್ಪಿಸಲು ಯತ್ನಿಸಿದಾಗ ಬೈಕ್‌ ನೆಲಕ್ಕೆ ಬಿದ್ದಿದೆ. ಕೂಡಲೇ ಇಬ್ಬರೂ ಹತ್ತಿರದ ಜನ ವಸತಿ ಸ್ಥಳಕ್ಕೆ ಓಡಿ ಬಚಾವಾಗಿದ್ದಾರೆ. ಪ್ರಕಾಶ್‌ ಅವರ ಬಲ ಕೈಗೆ ತಲವಾರು ಏಟು ಬಿದ್ದಿದ್ದು, ಈ ಕುರಿತಂತೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net