

ಗೋಣಿಕೊಪ್ಪಲು: ಕೊಡಗಿನ ಪುತ್ತರಿ ನಮ್ಮೆಯ ಮೂಲ ಅರ್ಥ ಹಾಗೂ ಉದ್ದೇಶವನ್ನು ಮರೆ ಮಾಚಿ ಇತ್ತೀಚಿನ ದಿನಗಳಲ್ಲಿ ಪುತ್ತರಿಯನ್ನು ಹುತ್ತರಿ ಹಬ್ಬವಾಗಿ ತಿರುಚಲಾಗುತ್ತಿದೆ. ಆಯಾಯ ಪ್ರಾಂತ್ಯದ ಜನರ ಮೂಲ ಪದ್ಧತಿ ಹಾಗೂ ಸಂಸ್ಕೃತಿಯ ಮೇಲೆ ಆಕ್ರಮಣ ಸರಿಯಲ್ಲ ಎಂದು ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಬೇಸರ ವ್ಯಕ್ತಪಡಿಸಿದರು.
ಇತ್ತೀಚೆಗೆ ಬೊಟ್ಟಿಯತ್ ನಾಡ್, ಕುತ್ತ್ ನಾಡ್ ಹಾಗೂ ಬೇರಳಿ ನಾಡ್ ಈ ಮೂರು ನಾಡುಗಳು ಒಟ್ಟಾಗಿ ಸೇರಿ ನಡೆಸುವ ಪುತ್ತರಿ ನಾಡೋರ್ಮೆ ಕಾರ್ಯಕ್ರಮ ಕೈಮುಡಿಕೆ ಪುತ್ತರಿ ಕೋಲ್ ಮಂದ್ ಸಭಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಒಂದು ಸಂಸ್ಕೃತಿ ಉಳಿದರೆ ಮಾತ್ರ ಆ ಜನಾಂಗ ಉಳಿಯಲು ಸಾಧ್ಯ, ಕೊಡಗಿನ ಶ್ರೀಮಂತ ಸಂಸ್ಕೃತಿ ಮಂದ್ ಮಾನಿಗಳಲ್ಲಿ ಅಡಗಿದ್ದು ಇದನ್ನು ಮುಂದಿನ ತಲೆಮಾರಿಗೂ ಉಳಿಸಿ ಬೆಳೆಸ ಬೇಕಾಗಿರುವುದು ನಮ್ಮ ಕರ್ತವ್ಯ, ಹಾಗೇ ಕೊಡಗಿನ ಪುತ್ತರಿ ಮುಂದಿನ ತಲೆಮಾರಿಗೂ ಪುತ್ತರಿಯಾಗಿಯೇ ಇರಬೇಕೇ ಹೊರತು ಹುತ್ತರಿಯಾಗಿ ಅಲ್ಲ ಎಂದು ಮಾರ್ಮಿಕವಾಗಿ ನುಡಿದರು.
ನಮ್ಮ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೂ ಉಳಿಸಿ ಬೆಳೆಸಬೇಕಾಗಿದೆ. ಆಚರಣೆಗಳು ಹಾಗೂ ಸಂಸ್ಕೃತಿಯ ಮೇಲೆ ಆಗಿಂದಾಗ್ಗೆ ಆಕ್ರಮಣಗಳು ನಡೆಯುತ್ತಿದ್ದು, ಕೊಡಗು ಕೃಷಿ ಪ್ರಧಾನ ಜಿಲ್ಲೆ. ಕೃಷಿ ಸಂಸ್ಕೃತಿ ಪ್ರತೀಕವಾದ ಪುತ್ತರಿ ನಮ್ಮೆಯನ್ನು ಇತ್ತೀಚಿನ ದಿನಗಳಲ್ಲಿ ಹುತ್ತರಿ ಹಬ್ಬವಾಗಿ ಮಾರ್ಪಾಡು ಮಾಡುತ್ತಿರುವುದು ವಿಷಾದನೀಯ. ಕೊಡಗಿನ ಪುತ್ತರಿಗೆ ಅದರದೇ ಆದ ಮೂಲ ಅರ್ಥ ಹಾಗೂ ಉದ್ದೇಶವಿದ್ದು, ಹುತ್ತರಿ ಎಂದು ಉಚ್ಛಾರಣೆ ಮಾಡುವವರು ಹುತ್ತರಿಯ ಅರ್ಥವನ್ನು ತಿಳಿಸಬೇಕಾಗಿದೆ ಎಂದು ಹೇಳಿದರು.
ಮತ್ತೊಬ್ಬ ಅತಿಥಿ ತೂಕ್ ಬೊಳಕ್ ಕಲೆ ಕ್ರೀಡೆ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮುಲ್ಲೇಂಗಡ ಶಂಕರಿ ಪೊನ್ನಪ್ಪ ಮಾತನಾಡಿ, ಕೊಡಗು ಸಿ ರಾಜ್ಯವಾಗಿದ್ದಾಗ ನಮ್ಮ ಹಬ್ಬಹರಿದಿನಗಳ ಹೆಚ್ಚಿನ ಮಹತ್ವ ನೀಡಿ ಸರ್ಕಾರಿ ರಜೆ ಘೋಷಣೆ ಆಗುತ್ತಿತ್ತು. ಆದರೆ ನಂತರ ದಿನಗಳಲ್ಲಿ ಕೊಡಗು ಕರ್ನಾಟಕದೊಂದಿಗೆ ವಿಲೀನವಾದ ನಂತರ ನಮ್ಮ ಸಂಸ್ಕೃತಿಗೆ ಪೆಟ್ಟು ಬಿದ್ದಿದೆ. ಕೊಡಗಿನ ಹಬ್ಬಗಳಿಗೆ ಶಾಲಾಕಾಲೇಜು ಸೇರಿದಂತೆ ಸರ್ಕಾರಿ ಕಚೇರಿಗಳಿಗೂ ರಜೆ ನೀಡುವಂತಾಗಬೇಕು ಎಂದರು.
ಬೊಟ್ಟಿಯತ್ ಮೂಂದ್ ನಾಡ್ ತಕ್ಕ ಮುಖ್ಯಸ್ಥ ಅಡ್ಡಂಡ ಪ್ರಕಾಶ್ ಕುಶಾಲಪ್ಪ ಮಾತನಾಡಿ, ಕೊಡವ ಸಂಸ್ಕೃತಿಯನ್ನು ನಮ್ಮವರೇ ಮೂಲೆ ಗುಂಪು ಮಾಡುತ್ತಿದ್ದು ಸಂಸ್ಕೃತಿಯನ್ನು ಹೈಜಾಕ್ ಮಾಡಲಾಗುತ್ತಿದೆ. ಗಂಗಾಪೂಜೆ ಸಮಯದಲ್ಲಿ ಮದುಮಗಳು ಕುಣಿಯುವ ಸಂಸ್ಕೃತಿ ಸೇರಿದಂತೆ ಊರ್ ಕೂಡುವ ಕಾರ್ಯಕ್ರಮದಲ್ಲಿ ಡಿಜೆ ಸಂಸ್ಕೃತಿಯಂತಹ ಅನಿಷ್ಠ ಪದ್ಧತಿ ನಮ್ಮ ಜನಾಂಗಕ್ಕೆ ಮಾರಕವಾಗಿದೆ ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಕುತ್ತ್ ನಾಡ್ ತಕ್ಕರಾದ ಪಂದಿಮಾಡ ರಮೇಶ್ ಅಚ್ಚಪ್ಪ, ಬೇರಳಿನಾಡ್ ತಕ್ಕರಾದ ಮಳವಂಡ ಭುವೇಸ್ ದೇವಯ್ಯ, ಕಾರ್ಯದರ್ಶಿ ನಾಳಿಯಮ್ಮನ ಉಮೇಶ್ ಕೇಚಮಯ್ಯ, ಸಹ ಕಾರ್ಯದರ್ಶಿ ಅಪ್ಪಂಡೇರಂಡ ಮನು ಮೋಹನ್ ಹಾಗೂ ತೀತಿಮಾಡ ಗಾಂಧಿ ಗಣೇಶ್, ತೀತಮಾಡ ಶಿವಮಣಿ ಕರುಂಬಯ್ಯ, ಹಳ್ಳಿಗಟ್ಟು ಊರು ತಕ್ಕರಾದ ಚಮ್ಮಟೀರ ಪ್ರವೀಣ್ ಉತ್ತಪ್ಪ, ಅಚ್ಚಿಯಂಡ ವೇಣುಗೋಪಾಲ್, ಬೇರಳಿನಾಡಿನ ಮೂಕಚಂಡ ಚುಮ್ಮಿ ದೇವಯ್ಯ, ಅಪ್ಪಂಡೇರಂಡ ಆಶೋಕ್, ಕೊಂಗಾಂಡ ಡೆಟ್ರಾನ್ ಸೇರಿದಂತೆ ಇತರ ತಕ್ಕಮುಖ್ಯಸ್ಥರು ಉಪಸ್ಥಿತರಿದ್ದರು.
ಮಂದ್ ಮಧ್ಯಭಾಗದಲ್ಲಿ ಇರುವ ಅರಳಿ ಮರಕ್ಕೆ ಕೋಲು ಹೊಡೆಯುವ ಮೂಲಕ ಮಂದ್ ಹಿಡಿಯುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.ಬಳಿಕ ಮೂರು ನಾಡಿನವರು ಸೇರಿ ಸಾಮೂಹಿಕ ಪುತ್ತರಿ ಕೋಲಾಟದ ಬಳಿಕ ವಿವಿಧ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ನಡೆದ ಸಾರ್ವಜನಿಕರಿಗೆ ಪೈಪೋಟಿ ಕಾರ್ಯಕ್ರದಲ್ಲಿ ಪುರುಷರು ಮಹಿಳೆಯರು ಸೇರಿದಂತೆ ಶಾಲಾ ಕಾಲೇಜು ಮಕ್ಕಳು ಪಾಲ್ಗೊಂಡು ಉಮ್ಮತಾಟ್, ಬೊಳಕಾಟ್, ಪುತ್ತರಿ ಕೋಲಾಟ್, ಪರೆಯಕಳಿ, ವಾಲಗತಾಟ್, ಕೊಡವ ಪಾಟ್ ಪೈಪೋಟಿ ಸೇರಿದಂತೆ ವಿವಿಧ ಪೈಪೋಟಿ ಕಾರ್ಯಕ್ರಮಗಳು ನಡೆಯಿತು.