ಕುಣಿಗಲ್‌ನಲ್ಲಿ ಜಿಂಕೆ ಮಾಂಸ ಮಾರುತ್ತಿದ್ದ ಹೋಟೆಲ್‌ಗಳ ಮೇಲೆ ದಾಳಿ

03Tmk_Kunigal_Deer
Published on

ಕುಣಿಗಲ್: ಜಿಂಕೆ ಮಾಂಸ ಮಾರಾಟ ಮಾಡುತ್ತಿದ್ದ ಎರಡು ಹೋಟೆಲ್ಗಳ ಮೇಲೆ ರಾಮನಗರ ಹಾಗೂ ಕುಣಿಗಲ್ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 5 ಕೆಜಿ ಜಿಂಕೆ ಮಾಂಸ ವಶಪಡಿಸಿಕೊಂಡು, ಒಬ್ಬನನ್ನು ಬಂಧಿಸಿದ್ದಾರೆ. ಅಂಚೆಪಾಳ್ಯ ಸಮೀಪದ ತಾಜ್ ಹೋಟೆಲ್ ಹಾಗೂ ತಿಪ್ಪಸಂದ್ರ ಹ್ಯಾಂಡ್ ಪೋಸ್ಟ್ ಬಳಿಯ ತಾಜ್ ಹೋಟೆಲ್‌ಗಳ ಮೇಲೆ ಶುಕ್ರವಾರ ಸಂಜೆ ದಾಳಿ ನಡೆಸಿದ ಅರಣ್ಯಾಧಿಕಾರಿಗಳು ಮಾಂಸ ಮಾರಾಟ ಮಾಡಿರುವುದನ್ನು ಪತ್ತೆ ಹಚ್ಚಿದ್ದಾರೆ.

ಅಧಿಕಾರಿಗಳ ದಾಳಿಯಿಂದ ಕಂಗಾಲಾದ ಮಾಲೀಕರು ಹಾಗೂ ಕ್ಯಾಷಿಯರ್, ಸಪ್ಲೆಯರ್‌ಗಳು ಪರಾರಿಯಾಗಿದ್ದು, ಸತೀಶ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ದಾಳಿ ವೇಳೆ ಬಾತುಕೋಳಿ. ಮೊಲದ ಮಾಂಸ, ಉಡದ ಮಾಂಸ ಪತ್ತೆಯಾಗಿರುವುದನ್ನು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಆದರೆ, ಜಿಂಕೆ ಮಾಂಸವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ನಂತರವೇ ಖಚಿತವಾಗಲಿದೆ. ರಾಮನಗರದ ಡಿಎಫ್‌ಒ ಸದಾಶಿವ ಹೆಗ್ಡೆ, ಮಾಗಡಿ ಆರ್‌ಎಫ್‌ಒ ಪುಷ್ಪಲತಾ ಹಾಗೂ ಕುಣಿಗಲ್ ಆರ್‌ಎಫ್‌ಒ ಮಂಜುನಾಥ್ ದಾಳಿ ನೇತೃತ್ವ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net