ಹಿಂದೂಗಳ ಮೇಲೆ ದಾಳಿ ಖಂಡನೀಯ

Published on

ಬಳ್ಳಾರಿ : ಕಾಶ್ಮೀರ ಕಣಿವೆಯ ಪಹಲ್ಗಾಮ್‌ನಲ್ಲಿ ಹಿಂದೂಗಳ ಮೇಲೆ ಉಗ್ರರ ದಾಳಿ ಖಂಡಿಸಿ ಇಲ್ಲಿನ ಡಿಸಿ ಕಚೇರಿ ಆವರಣದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ವತಿಯಿಂದ ಗುರುವಾರ ಪ್ರತಿಟನೆ ನಡೆಯಿತು.

ಎಬಿವಿಪಿ ಜಿಲ್ಲಾ ಸಂಚಾಲಕ ಸುರೇಶ್ ಬಡಿಗೇರ್ ಮಾತನಾಡಿ, ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ಹೇಡಿತನ ಕೃತ್ಯವಾಗಿದೆ. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬುದು ಸಾರ್ವಕಾಲಿಕ ಸತ್ಯವಾಗಿದೆ.

ಪ್ರತ್ಯೇಕವಾದದ ಮನಸ್ಥಿತಿಯನ್ನು ಬದಲಾಯಿಸಲು ಹಾಗೂ ಜನ-ಜೀವನ ಸ್ಥಿತಿಗತಿಗಳನ್ನು ಸ್ಥಿರಗೊಳಿಸಿ ಶಾಂತಿಯುತ ಕಾಶ್ಮೀರವೆಂಬುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಈಗಾಗಲೇ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆ. ಆದರೂ ಭಯೋತ್ಪಾದಕರ ನುಸುಳುಕೋರರ ಹಾವಳಿ ತಡೆಗಟ್ಟಲು ಸ್ಯಾವಾಗಿಲ್ಲ ಎಂದರು.

ಪ್ರವಾಸಿಗರ ಈ ದಾಳಿ ನಡೆದಿರುವ ಬಗ್ಗೆ ಗಮನಿಸುವುದಾದರೆ ಕಾಶ್ಮೀರದ ಶಾಂತಿ ಮತ್ತು ಭಾರತದೊಂದಿಗಿನ ಏಕತೆಗೆ ಉಗ್ರರು ಅರ್ಥಾತ್ ಪ್ರತ್ಯೇಕವಾದಿಗಳು ತೀವ್ರ ಸವಾಲುವೊಡ್ಡುತ್ತಿರುವುದು ಕಳವಳಕಾರಿಯದ ಸಂಗತಿಯಾಗಿದೆ. ಆದ್ದರಿಂದ, ಕೇಂದ್ರ ಸರ್ಕಾರ ಉಗ್ರರ ವಿರುದ್ಧ ವ್ಯಾಪಕ ಕಠಿಣ ಕ್ರಮಗಳನ್ನು ಕೈಗೊಂಡು ತಕ್ಕ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಇಲ್ಲಿನ ಸರಳಾದೇವಿ ಕಾಲೇಜಿನಿಂದ ಪ್ರಾರಂಭವಾದ ಪ್ರತಿಭಟನೆ ಮೆರವಣಿಗೆಯು ರಾಯಲ್ ವೃತ್ತ ಮಾರ್ಗವಾಗಿ ಡಿಸಿ ಕಚೇರಿಯವರೆಗೆ ತಲುಪಿತು. ರಾಯಲ್ ವೃತ್ತದಲ್ಲಿ ಸಂಘಟನಕಾರರು ಟೈರ್‌ಗೆ ಬೆಂಕಿ ಹಚ್ಚಿ ಅಕ್ರೋಶ ಹೊರಹಾಕಿದರು. ಮೆರವಣಿಗೆಯಲ್ಲಿ ಪಾಕಿಸ್ತಾನ ವಿರುದ್ಧ ಘೋಷಣೆ ಕೂಗಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net