ರಾತ್ರಿ ಕರ್ಫ್ಯೂನಿಂದ ಮತ್ತೆ ಆರ್ಥಿಕ ಹೊಡೆತ

Weekend curfew
Published on

ಮಂಗಳೂರು: ಪ್ರವಾಸಿಗರು ಹೆಚ್ಚು ಓಡಾಡುವ ವರ್ಷಾರಂಭದ ಹೊತ್ತಲ್ಲೇ ರಾತ್ರಿ ಕರ್ಫ್ಯೂ ವಿಧಿಸಿರುವುದು ವ್ಯಾಪಾರಸ್ಥರು, ಹೋಟೆಲ್, ಬಾರ್ ಆ್ಯಂಡ್ ರೆಸ್ಟೋರೆಂಟ್ ಮಾಲೀಕರು, ಟ್ಯಾಕ್ಸಿ ಚಾಲಕರು, ಮಾಲೀಕರು ಮುಂತಾದ ವಿಭಾಗಗಳ ಜನರಲ್ಲಿ ಆತಂಕ ಮೂಡಿಸಿದೆ.

ವಿಶೇಷವಾಗಿ ಹೋಟೆಲ್ ಉದ್ಯಮಕ್ಕೆ ಹೆಚ್ಚಿನ ಹೊಡೆತ ಬೀಳುವ ಭೀತಿ ಎದುರಾಗಿದೆ. ಪ್ರಥಮ ಲಾಕ್‌ಡೌನ್ ಮುಗಿಯುವ ವೇಳೆಗೆ ಹೋಟೆಲ್ ಉದ್ಯಮ ದೊಡ್ಡ ನಷ್ಟ ಅನುಭವಿಸಿತ್ತು. ಕರೊನಾ ಅವಧಿಯಲ್ಲಿ ಕೆಲ ಹೋಟೆಲ್‌ಗಳು ಶಾಶ್ವತವಾಗಿ ಮುಚ್ಚಿದ್ದವು.

ರಾತ್ರಿ ಕರ್ಫ್ಯೂ ಅವಧಿಯಲ್ಲಿ ಹೋಟೆಲ್‌ಗಳು ಮಾತ್ರವಲ್ಲದೆ, ವಸತಿಗೃಹಗಳು ಕೂಡ ಖಾಲಿಯಾಗಲಿವೆ. ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಲ್ಲಿ ಹೆಚ್ಚು ವ್ಯಾಪಾರ ನಡೆಯುವ ಸಮಯವೇ ರಾತ್ರಿ. ಇದೇ ಸಮಯದಲ್ಲಿ ಜನರ ಓಡಾಟಕ್ಕೆ ನಿರ್ಬಂಧವಿರುವುದರಿಂದ ಇಲ್ಲಿನ ವ್ಯಾಪಾರ ಬಹುಪಾಲು ನಷ್ಟವಾಗಲಿದೆ.

ಟ್ಯಾಕ್ಸಿ ಚಾಲಕರಿಗೆ ಸಂಕಷ್ಟ: ಟ್ಯಾಕ್ಸಿ ಚಾಲಕರದು ಇನ್ನೊಂದು ರೀತಿಯ ಕಷ್ಟ. ರಾತ್ರಿ ಓಡಾಟ ನಿರ್ಬಂಧ ಸಮಯದಲ್ಲಿ ದೂರದ ಊರುಗಳಿಗೆ ಬಾಡಿಗೆ ಸಿಗುವುದು ಕೂಡ ಕಡಿಮೆ. ಕೇರಳ- ಕರ್ನಾಟಕ ಗಡಿ ಪ್ರದೇಶದ ಟ್ಯಾಕ್ಸಿ ಚಾಲೀಕರು ಕೇರಳದಲ್ಲಿ ಓಡಾಟ ನಡೆಸಲು ಪರವಾನಗಿ ಪಡೆದಿದ್ದರೂ ಪ್ರಯೋಜನವಿಲ್ಲ. ಗಡಿ ನಿರ್ಬಂಧದಿಂದ ಕೂಡ ಅವರಿಗೆ ನಷ್ಟವಾಗಿದೆ.

ಉಳಿದಂತೆ ಸರಕು ಸಾಗಾಟದ ವಾಹನಗಳಿಗೆ ಸಮಸ್ಯೆ ಇಲ್ಲ. ತುರ್ತು ಸೇವೆಗಳಿಗೂ ಆತಂಕವಿಲ್ಲ. ಕರೊನಾ ಮೂರನೇ ಅಲೆ ಮತ್ತು ಒಮಿಕ್ರಾನ್ ಸೋಂಕು ತೀವ್ರ ಸ್ವರೂಪ ಪಡೆಯುವ ಸಾಧ್ಯತೆ ಬಗ್ಗೆ ತಜ್ಞರು ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಸರ್ಕಾರ ರಾಜ್ಯದಾದ್ಯಂತ ರಾತ್ರಿ ಕರ್ಫ್ಯೂ ವಿಧಿಸಿರುವ ಭಾಗವಾಗಿ ಕರ್ನಾಟಕ ಕರಾವಳಿ ಜಿಲ್ಲೆಗಳಲ್ಲಿ ಕೂಡ ನಿರ್ಬಂಧ ಜಾರಿಯಲ್ಲಿದೆ.

ಕರೊನಾ ಸೋಂಕು ಪ್ರಮಾಣ ಸರಾಸರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.0.24, ಕಾಸರಗೋಡಿನಲ್ಲಿ ಶೇ.4 ಇದೆ. ಜಿಲ್ಲೆಯ ಎಲ್ಲೂ ಸೋಂಕಿನಿಂದ ತೀವ್ರ ರೀತಿಯ ಸಮಸ್ಯೆ ಇಲ್ಲ. ದಕ್ಷಿಣ ಕನ್ನಡದಲ್ಲಿ ವಿದೇಶಗಳಿಂದ ಆಗಮಿಸಿದ ಏಳು ಮಂದಿಯಲ್ಲಿ ಒಮಿಕ್ರಾನ್ ಸೋಂಕು ದೃಢಪಟ್ಟಿದ್ದರೂ, ನಿಯಂತ್ರಣಕ್ಕೆ ಬಂದಿದೆ.

ಪ್ರವಾಸೋದ್ಯಮಕ್ಕೂ ಪೆಟ್ಟು: ಹೊಸ ವರ್ಷ ಮತ್ತು ಕ್ರಿಸ್‌ಮಸ್ ಜತೆಯಾಗಿ ಬರುವ ಈ ಅವಧಿಯಲ್ಲಿ ವಿದೇಶ ಹಾಗೂ ಪರ ಊರುಗಳಲ್ಲಿ ನೆಲೆಸಿರುವ ಜನರು ಹೆಚ್ಚಿನವರು ಊರಿಗೆ ಮರಳುತ್ತಾರೆ. ಕುಟುಂಬ ಸದಸ್ಯರ ಜತೆ ಓಡಾಡುತ್ತಾರೆ. ಇತರ ಜನರು ಕೂಡ ಈ ಸಂದರ್ಭ ಪ್ರವಾಸ ಕೈಗೊಳ್ಳಲು ಪ್ಲಾನ್ ಹಾಕಿಕೊಂಡು ಇರುತ್ತಾರೆ. ಈ ಸಂದರ್ಭ ಹೆಚ್ಚಿನ ವ್ಯಾಪಾರ ನಡೆಯುತ್ತದೆ. ರಾತ್ರಿ ಕರ್ಫ್ಯೂ ಇಂತಹ ಅವಕಾಶವನ್ನು ಮೊಟಕುಗೊಳಿಸಿದೆ.

ಎರಡು ವರ್ಷ ಪೆಟ್ಟು ತಿಂದಿದ್ದೇವೆ. ವರ್ಷಾರಂಭ ಇಡೀ ವರ್ಷದಲ್ಲಿ ಒಳ್ಳೆಯ ವ್ಯಾಪಾರ ಇರುವ ಸಂದರ್ಭ. ಈ ಅವಧಿಯಲ್ಲಿ ರಾತ್ರಿ ಕರ್ಫ್ಯೂ ವಿಧಿಸಿದ ಕಾರಣ ಸ್ವಲ್ಪ ಒಳ್ಳೆಯ ವ್ಯಾಪಾರ ಇರುವ ಸಾಯಂಕಾಲ ಬಳಿಕ ಜನರು ಪೇಟೆಯಲ್ಲಿ ಓಡಾಡುವುದನ್ನೇ ಕಡಿಮೆ ಮಾಡುತ್ತಾರೆ. ಹೆಚ್ಚು ಆದಾಯ ತರುವ ಪ್ರವಾಸಿಗರ ಸಂಚಾರ ಗಣನೀಯ ಪ್ರಮಾಣದಲ್ಲಿ ಕುಸಿಯಬಹುದು. ಇದರ ದುಷ್ಪರಿಣಾಮ ಉದ್ಯಮದ ಮೇಲೆ ಖಂಡಿತಾ ಬೀಳುತ್ತದೆ. ಕುಡ್ಪಿ ಜಗದೀಶ ಶೆಣೈ, ಅಧ್ಯಕ್ಷರು, ದ.ಕ. ಹೋಟೆಲ್ ಮಾಲೀಕರ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net