ಭಾವಮೈದುನನಿಂದ ಭಾವನ ಮೇಲೆ ಹಲ್ಲೆ

20 yelandur 01
ಯಳಂದೂರು ಪಟ್ಟಣದ ಬಳೇಪೇಟೆ ನಿವಾಸಿಗಳಾದ ಮಹಮ್ಮದ್ ತೌಸಿಫ್ ಹಾಗೂ ಮಹಮ್ಮದ್ ಕಾಶಿಫ್ ಗಾಯಗೊಂಡಿರುವುದು.
Published on

ಯಳಂದೂರು: ಪಟ್ಟಣದ ಬಳೇಪೇಟೆಯ ಹಳ್ಳದ ಬೀದಿಯಲ್ಲಿ ಗುರುವಾರ ರಾತ್ರಿ ಅಣ್ಣ-ತಮ್ಮನಿಗೆ ಚಾಕುವಿನಿಂದ ಇರಿದು ಗಾಯಗೊಳಿಸಲಾಗಿದೆ. ಘಟನೆ ಸಂಬಂಧ ಒಬ್ಬ ಪೊಲೀಸರಿಗೆ ಶರಣಾಗಿದ್ದು, ಮತ್ತೊಬ್ಬ ನಾಪತ್ತೆಯಾಗಿದ್ದಾನೆ.

ಇಲ್ಲಿನ ಜಿಯಾವುಲ್ಲಾ ಅವರ ಮಕ್ಕಳಾದ ಮಹಮ್ಮದ್ ತೌಸಿಫ್ ಹಾಗೂ ಮಹಮ್ಮದ್ ಕಾಶಿಫ್ ಗಾಯಗೊಂಡವರಾಗಿದ್ದು, ಪಟ್ಟಣದ ಸಾರ್ವಜನಿಕರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಚಾಮರಾಜನಗರದ ಸಿಮ್ಸ್‌ನಲ್ಲಿ ಚಿಕಿತ್ಸೆ ಕೊಡಿಸಲಾಗಿ ಈಗ ಚೇತರಿಸಿಕೊಳ್ಳುತ್ತಿದ್ದಾರೆ.

ಚಾಕುವಿನಿಂದ ಇರಿದಿದ್ದ ಯಳಂದೂರು ಪಟ್ಟಣದ ಸೈಯದ್ ಶಾಹೀದ್ ಠಾಣೆಗೆ ಶರಣಾಗಿದ್ದು ಈತನ ಸ್ನೇಹಿತ ಮತ್ತೊಬ್ಬ ಆರೋಪಿ ಚಾಟೀಪುರ ಗ್ರಾಮದ ಕಾಶಿಫ್ ಷರೀಫ್ ನಾಪತ್ತೆಯಾಗಿದ್ದಾನೆ.

ಘಟನೆಗೆ ಕಾರಣ: ಪಟ್ಟಣದ ವಾಸಿಯಾಗಿರುವ ಮಹಮ್ಮದ್ ತೌಸಿಫ್‌ಗೆ ಸ್ಥಳೀಯ ಸನಾವುಲ್ಲಾ ಅವರ ಮಗಳು ಹೀನಾ ಬೇಗಂ ಅವರೊಂದಿಗೆ ವಿವಾಹವಾಗಿತ್ತು. ಈ ನಡುವೆ ಹೀನಾ ಕೆಲಸಕ್ಕೆ ಹೋಗುತ್ತೇನೆಂದು ಪತಿಗೆ ತಿಳಿಸಲಾಗಿ, ಈಗ 9 ತಿಂಗಳ ಮಗಳಿದ್ದು ಬೇಡ ಎಂದು ಹೇಳಿದ್ದಾನೆ. ಇದರಿಂದ ಕೋಪಗೊಂಡ ಪತ್ನಿ ಮನೆಯಿಂದ ಹೊರಹೋಗಿದ್ದ್ದಾಳೆ.

ಆ ಬಳಿಕ ಹೀನಾಳ ತಮ್ಮ ಸೈಯದ್ ಶಾಹೀದ್ ಗುರುವಾರ ರಾತ್ರಿ ತನ್ನ ಸ್ನೇಹಿತ ಕಾಶಿಫ್ ಷರೀಫ್‌ನೊಂದಿಗೆ ಬಂದು ಮಹಮ್ಮದ್ ತೌಸಿಫ್‌ಗೆ ಚಾಕುವಿನಿಂದ ಹೊಟ್ಟೆ ಭಾಗಕ್ಕೆ ಚುಚ್ಚಿದ್ದಾನೆ. ಈ ಸಂದರ್ಭ ಜಗಳ ಬಿಡಿಸಲು ಬಂದು ತೌಸಿಫ್‌ನ ಸಹೋದರ ಮಹಮ್ಮದ್ ಕಾಶಿಫ್ ಮೇಲೂ ಚಾಕುವಿನಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದಾನೆ ಎಂದು ಗಾಯಾಳು ಮಹಮ್ಮದ್ ತೌಸಿಫ್ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net