ವಾಕಿಂಗ್​ ಮಾಡುತ್ತಿದ್ದವನ ಮೇಲೆ ಹಲ್ಲೆ

Published on

ಬಂಗಾರಪೇಟೆ: ತಾಲೂಕಿನ ದಾಸರಹೊಸಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ವಾಕಿಂಗ್​ ಮಾಡುತ್ತಿದ್ದವನ ಮೇಲೆ ಅಪರಿಚಿತರು ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಗ್ರಾಮದ ಸತೀಶ್​(21) ಹಲ್ಲೆಗೊಳಗಾದವ.

ಶುಕ್ರವಾರ ರಾತ್ರಿ ಊಟದ ಬಳಿಕ ಸತೀಶ್​ ವಾಕಿಂಗ್​ ಮಾಡುತ್ತಿದ್ದ. ಈ ವೇಳೆ ಮುಖಕ್ಕೆ ಮಾಸ್ಕ್​ ಹಾಕಿಕೊಂಡು ಬೈಕ್​ನಲ್ಲಿ ಬಂದ ಇಬ್ಬರು ಲಾಂಗ್​ನಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಸ್ಥಳಿಯರು ಸತೀಶ್​ನ ಸಹಾಯಕ್ಕೆ ಬರುತ್ತಿದ್ದಂತೆ ದುಷ್ಕರ್ಮಿಗಳು ಬೈಕ್​ ಬಿಟ್ಟು, ದೂರದಲ್ಲಿ ನಿಲ್ಲಿಸಿದ್ದ ಕಾರ್​ನಲ್ಲಿ ಪರಾರಿಯಾಗಿದ್ದಾರೆ ಎನ್ನಲಾಗಿದ್ದು, ಹಲ್ಲೆಯಲ್ಲಿ ಸತೀಶನ ಹೊಟ್ಟೆಯ ಎಡ ಭಾಗಕ್ಕೆ, ಬಲಗೈ ಬೆರಳಿಗೆ ಮತ್ತು ಬಲಭಾಗದ ತೊಡೆಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಬಂಗಾರಪೇಟೆ ಪೊಲೀಸರು ಬೈಕ್​ ಅನ್ನು ವಶಕ್ಕೆ ಪಡೆದಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಬಾರ್​ ಆರಂಭ ಬೇಡ ಎಂದಿದ್ದಕ್ಕೆ ಸುಾರಿ?: ದಾಸರಹೊಸಳ್ಳಿ ಸಮೀಪ ರಾಜಕಾರಣಿಯೊಬ್ಬರು ಬಾರ್​ ಆ್ಯಂಡ್​ ರೆಸ್ಟೋರೆಂಟ್​ ತೆರೆಯಲು ಸಿದ್ಧತೆ ನಡೆಸಿದ್ದರು. ಸ್ಥಳ ಪರಿಶೀಲನೆ ಹಾಗೂ ಸರ್ವೇಗೆ ಅಬಕಾರಿ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿದಾಗ ಗ್ರಾಮದ ಹಲವರು ಅಡ್ಡಿ ಪಡಿಸಿದ್ದರು. ಅಲ್ಲದೆ ಯಾವ ಕಾರಣಕ್ಕೂ ಬಾರ್​ ಆ್ಯಂಡ್​ ರೆಸ್ಟೋರೆಂಟ್​ ತೆರೆಯದಂತೆ ಸತೀಶ್​ ಹಾಗೂ ಇತರರು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಸುಫಾರಿ ಕೊಟ್ಟು ದುಷ್ಕರ್ಮಿಗಳಿಂದ ಹಲ್ಲೆ ಮಾಡಿಸಲಾಗಿದೆ ಎನ್ನಲಾಗಿದೆ. ಬಂಗಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಲಿಸುತ್ತಿದ್ದ ರೈಲಿಗೆ ಬಿದ್ದು ಯುವಕ ಆತ್ಮಹತ್ಯೆ

ಶ್ರೀನಿವಾಸಪುರ: ತಾಲೂಕಿನ ಚಲ್ದಿಗಾನಹಳ್ಳಿ ಬಳಿ ಚಲಿಸುತ್ತಿದ್ದ ರೈಲಿಗೆ ಬಿದ್ದು, ಯುವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ತಾಲೂಕಿನ ಶಿವಪುರ ಗ್ರಾಮದ ಶಶಿಕುಮಾರ್​ (23) ಮೃತ.

ಶನಿವಾರ ಶ್ರೀನಿವಾಸಪುರ ರೈಲ್ವೆ ಸ್ಟೇಷನ್​&ಚಲ್ದಿಗಾನಹಳ್ಳಿ ಮಾರ್ಗಮಧ್ಯೆ ಬೆಂಗಳೂರಿನಿಂದ ಶ್ರೀನಿವಾಸಪುರ ಮಾರ್ಗವಾಗಿ ಕೋಲಾರಕ್ಕೆ ಹೊರಟಿದ್ದ ರೈಲಿಗೆ ಶಿವುಕುಮಾರ್​ ಬಿದ್ದಿದ್ದಾನೆ ಎನ್ನಲಾಗಿದೆ. ಶಶಿಕುಮಾರ್​ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದ. ಮಗನ ಆರೈಕೆಗೆಂದೆ ಶಶಿಕುಮಾರ್​ ತಾಯಿ ಕೆಲಸಕ್ಕೂ ಹೋಗದೆ ಮನೆಯಲ್ಲಿಯೇ ಇರುತ್ತಿದ್ದರು. ಆರೋಗ್ಯ ಸಮಸ್ಯೆಯಿಂದಲೇ ಮಾನಸಿಕವಾಗಿ ಕುಗ್ಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಶಿಕುಮಾರ್​ ತಂದೆ ಅಳಲು ಕೊಂಡರು.

ಶ್ರೀನಿವಾಸಪುರ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net