

ಮಡಿಕೇರಿ: ಮಸೀದಿ ಹಾಗೂ ಅಂಗನವಾಡಿ ಜಾಗದ ಸಮಸ್ಯೆಗೆ ಸಂಬಂಧಿಸಿದಂತೆ ವಿನಾಕಾರಣ ಜೆಡಿಎಸ್ ವಿರಾಜಪೇಟೆ ತಾಲೂಕು ಯುವ ಘಟಕದ ಅಧ್ಯಕ್ಷ ಸೈಫುದ್ದೀನ್ ಚಾಮಿಯಾಲ ಅವರ ಮೇಲೆ ಹಲ್ಲೆ ಪ್ರಕರಣವನ್ನು ಕೊಡಗು ಜಿಲ್ಲಾ ಜೆಡಿಎಸ್ ತೀವ್ರವಾಗಿ ಖಂಡಿಸುತ್ತದೆ ಎಂದು ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಾಸೀರ್ ಮೂರ್ನಾಡು ತಿಳಿಸಿದ್ದಾರೆ.
ಹಲ್ಲೆಯಿಂದ ವಿರಾಜಪೇಟೆ ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಿರುವ ಸೈಫುದ್ದೀನ್ ಚಾಮಿಯಾಲ ಅವರನ್ನು ಭೇಟಿ ಮಾಡಿ ಧೈರ್ಯ ತುಂಬಿರುವ ಕೊಡಗು ಜೆಡಿಎಸ್ ಘಟಕ ಎಲ್ಲಾ ರೀತಿಯ ಕಾನೂನು ಹೋರಾಟಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭ ಮಾತನಾಡಿದ ಜಾಸೀರ್ ಮೂರ್ನಾಡು, ಎರಡು ಗೋಡೆಯ ಮಧ್ಯೆ ಇತ್ಯರ್ಥ ಪಡಿಸಬೇಕಾದ ಪ್ರಕರಣವನ್ನು ಬೀದಿ ಜಗಳಕ್ಕೆ ತಂದು ಜೆಡಿಎಸ್ ಯುವ ಘಟಕದ ತಾಲೂಕು ಅಧ್ಯಕ್ಷ ಸೈಫುದ್ದೀನ್ ಚಾಮಿಯಾಲ ಅವರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ಹಲ್ಲೆ ನಡೆಸಿರುವ ಆರೋಪಿಗಳ ಮೇಲೆ ಕಠಿಣ ಕ್ರಮಕೈಗೊಳ್ಳಬೇಕೆಂದು ಜಾಸೀರ್ ಮೂರ್ನಾಡು ಒತ್ತಾಯಿಸಿದರು.
ಈ ಸಂದರ್ಭ ಕುಶಾಲನಗರ ತಾಲೂಕು ಅಧ್ಯಕ್ಷ ಶಿಯಾಬುದ್ದಿನ್, ವಿರಾಜಪೇಟೆ ತಾಲೂಕು ಅಧ್ಯಕ್ಷ ಮಜೀದ್ ಚೋಕಂಡಳ್ಳಿ, ಹಿಂದುಳಿದ ಮಹಿಳಾ ಘಟಕ ಅಧ್ಯಕ್ಷ ಜಯಮ್ಮ ಅಮ್ಮತಿ ಇದ್ದರು.