

ತುಮಕೂರು : ಅಟವೀ ಸ್ವಾಮೀಜಿ 120ನೇ ಹಾಗೂ ಉದ್ದಾನ ಮಹಾಶಿವಯೋಗಿಗಳ 80ನೇ ಪುಣ್ಯಾರಾಧನೆ ಮತ್ತು ಗ್ರಾಮಾಂತರ ಬಸವಜಯಂತಿ ಸಮಾರೋಪ ಹಿನ್ನೆಲೆಯಲ್ಲಿ ಶ್ರೀಮಠದ ಆವರಣದಲ್ಲಿ ಗುರುವಾರ ವಿವಿಧ ಮಠಾಧೀಶರ ನೇತೃತ್ವದಲ್ಲಿ ಲಿಂಗೈಕ್ಯ ಶ್ರೀಗಳವರ ಪುಣ್ಯಾರಾಧನೆ ಉತ್ಸವ ನಡೆಯಿತು.
ಸಿದ್ಧಗಂಗಾ ಮಠದ ಧಾರ್ಮಿಕ ಕಾರ್ಯದ ಜತೆಗೆ ದಾಸೋಹ, ಕಾಯಕ, ಶಿಕ್ಷಣ ಸೇವೆಯನ್ನು ಸೇರಿಸುವ ಮೂಲಕ ಸೇವಾ ವ್ಯಾಪ್ತಿಯನ್ನು ವಿಸ್ತರಿಸಿದ ಅಟವಿಶ್ರೀಗಳು ಹಾಗೂ ಉದ್ದಾನ ಶ್ರೀಗಳ ಸೇವೆ ಪ್ರಾತಃಸ್ಮರಣೀಯ ಎಂದು ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಹೇಳಿದರು.
ಶ್ರೀಮಠಕ್ಕೆ ಭದ್ರ ಬುನಾದಿ ಹಾಕಿದ ಅಟವೀ ಶ್ರೀಗಳು ಹಾಗೂ ಉದ್ಧಾನ ಶಿವಯೋಗಿಗಳ ಮಹತ್ಕಾರ್ಯವನ್ನು ಸ್ಮರಣಿಸುವುದು ನಮ್ಮೆಲ್ಲರ ಪುಣ್ಯ. ಈ ಬಾರಿ ಕರೊನಾ ಹಿನ್ನೆಲೆಯಲ್ಲಿ ವೇದಿಕೆ ಕಾರ್ಯಕ್ರಮ ಇಲ್ಲದಿದ್ದರೂ ಸರಳವಾಗಿ ಪೂಜ್ಯರ ಮೆರವಣಿಗೆ ನಡೆಸುವ ಮೂಲಕ ಸರಳವಾಗಿ ಆಚರಿಸಿರುವುದು ವಿಶೇಷವೆನಿಸಿದೆ ಎಂದರು.
ಸೂರ್ಯ ಪಥವನ್ನು ಬದಲಾಯಿಸುವ ಹಾಗೆ ಮನುಷ್ಯನು ಕೂಡ ತನ್ನ ಹಳೆಯ ಪಥವನ್ನು ಬಿಟ್ಟು ಹೊಸಪಥವನ್ನು ಬದಲಾಯಿಸುವ ವಾತಾವರಣ ವಿಶ್ವಪಥವಾಗಿಸಬೇಕು. ಮಂಗಳಕರವಾದ ಪಥವಾಗಬೇಕು. ಉತ್ತರಾಯಣ ಕಾಲದಲ್ಲಿ ತನು, ಮನ, ಭಾವಗಳನ್ನು ಶುದ್ಧಗೊಳಿಸುವ ಸುಸಂದರ್ಭ ಇದಾಗಿದೆ ಎಂದು ತಿಳಿಸಿದರು.
ಪೂಜ್ಯರ ಭಾವಚಿತ್ರ ಉತ್ಸವ: ಲಿಂಗೈಕ್ಯ ಶ್ರೀಗಳ ಭಾವಚಿತ್ರ ಉತ್ಸವವು ಶ್ರೀಮಠದ ಆವರಣದಲ್ಲಿ ನಡೆಯಿತು. ಶಿವಕುಮಾರ ಶ್ರೀಗಳ ಗದ್ದುಗೆ ಬಳಿಯಿಂದ ಪೂರ್ಣಕುಂಭ ಹೊತ್ತ ಮಹಿಳೆಯರು, ನಂದಿಧ್ವಜ ಕುಣಿತಗಳೊಂದಿಗೆ ಮೆರವಣಿಗೆ ಸಾಗಿದರು.
ಉದ್ದಾನ ಶಿವಯೋಗಿಗಳ ಗದ್ದುಗೆ ವಿಶೇಷವಾಗಿ ಅಕ್ಕಿಪೂಜೆ ಅಲಂಕಾರ ಮಾಡಲಾಗಿತ್ತು. ಸಂಕ್ರಾಂತಿ ಹಬ್ಬ ಹಿನ್ನೆಲೆಯಲ್ಲಿ ಮಠದಲ್ಲಿ ಜನಜಾತ್ರೆಯೇ ಸೇರಿತ್ತು.