

ಮೈಸೂರು: ಬೆಳಗಾವಿಯಲ್ಲಿ ಮರಾಠಿಗರ ಪುಂಡಾಟಿಕೆ ಖಂಡಿಸಿ, ಎಂಇಎಸ್ ನಿಷೇಧ, ಕಳಸ ಬಂಡೂರಿ, ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ ನಗರದ ಗ್ರಾಮಾಂತರ ಬಸ್ ನಿಲ್ದಾಣದ ಎದುರು ಬುಧವಾರ ಪ್ರತಿಭಟನೆ ನಡೆಯಿತು.
ಈ ಸಂದರ್ಭ ಮಾತನಾಡಿದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ಬೆಳಗಾವಿಯಲ್ಲಿ ಮರಾಠಿಗರ ಪುಂಡಾಟಿಕೆ, ಅಟ್ಟಹಾಸ ಹೆಚ್ಚಾಗಿದೆ. ಹೀಗಾಗಿ ಎಂಇಎಸ್ ನಿಷೇಧ ಮಾಡಬೇಕು. ಕಳಸಾ ಬಂಡೂರಿ, ಮಹದಾಯಿ ಯೋಜನೆಯನ್ನು ಕೂಡಲೇ ಆರಂಭಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದ ಮೇಲೆ ಹಿಂದಿ ಹೇರಿಕೆ ಬೇಡವೇ ಬೇಡ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಯಾಗಬೇಕು. ರಾಜ್ಯದ ಕಂಡಕ್ಟರ್ ಮೇಲೆ ಮರಾಠಿಗರ ದಾಳಿ ಕುರಿತು ಸಮಗ್ರ ತನಿಖೆ ಆಗಬೇಕು. ಜತೆಗೆ ಮೇಕೆದಾಟು ವಿರೋಧಿಸುತ್ತಿರುವ ತಮಿಳುನಾಡು, ರಾಜ್ಯಕ್ಕೆ ಬೆಂಬಲ ನೀಡಿದ ಕೇಂದ್ರ ಸರ್ಕಾರದ ವಿರುದ್ಧ ಮಾ.22ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಕನ್ನಡಿಗರು ಈ ಬಂದ್‌ಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕನ್ನಡಿಗರಿಗಾಗಿ, ಕನ್ನಡಿಗರ ಗೌರವ ಸ್ವಾಭಿಮಾನಕ್ಕೆ, ಕನ್ನಡಕ್ಕಾಗಿ ಕರ್ನಾಟಕ ಬಂದ್ ಮಾಡಲಾಗುತ್ತಿದೆ. ಬೆಳಗಾವಿಯಿಂದ ಚಾಮರಾಜನಗರವರೆಗೆ ಬಂದ್ ಇರಲಿದೆ. ಬೆಳಗಾವಿ ಕನ್ನಡಿಗರ ಕೈಯಲ್ಲಿ ಇಲ್ಲ, ಮರಾಠಿಗರ ಕೈಯಲ್ಲಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಗಡಿನಾಡುಗಳ ಬೆಳವಣಿಗೆಯಾಗಬೇಕು, ಸಾಂಬಾಜಿ ಪ್ರತಿಮೆ ತೆಗೆಯಬೇಕು. ಕೊಪ್ಪಳ ಸುತ್ತ ಯಾವ ಕಾರ್ಖಾನೆಗಳು ಬೇಡವೇ ಬೇಡ, ಕರ್ನಾಟಕದಲ್ಲಿ ಪರಭಾಷಾ ದಬ್ಬಾಳಿಕೆ ನಿಲ್ಲಬೇಕು, ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳ ಬಹಿಷ್ಕಾರ ಮಾಡಬೇಕು, ಮಹಾರಾಷ್ಟ್ರದಲ್ಲಿ ಕನ್ನಡ ಮಹಾಮಹಿಮರ ಪ್ರತಿಮೆಗಳು ಸ್ಥಾಪನೆಯಾಗಬೇಕು. ಮಂಗಳೂರು-ಕಾರವಾರ ಬಂದರು ಅಭಿವೃದ್ಧಿ ಮಾಡಬೇಕು ಎಂದು ಆಗ್ರಹಿಸಿದರು.