ದೌರ್ಜನ್ಯ ದೂರು ಬಂದರೆ ತಕ್ಷಣ ಕ್ರಮ

26Manju4
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಎಸ್‌ಸಿ, ಎಸ್‌ಟಿ ದೌರ್ಜನ್ಯ ನಿಯಂತ್ರಣ ಸಮಿತಿ ಸಭೆಯಲ್ಲಿ ಡಿಸಿ ಮೊಹಮ್ಮದ್ ರೋಷನ್ ಮಾತನಾಡಿದರು. ರಾಹುಲ ಶಿಂಧೆ, ಡಾ.ಭೀಮಾಶಂಕರ ಗುಳೇದ, ಇಡಾ ಮಾರ್ಟಿನ್ ಮಾರ್ಬನ್ಯಾಂಗ್ ಇತರರಿದ್ದರು.
Published on

ಬೆಳಗಾವಿ: ಅನುಸೂಚಿತ ಜಾತಿ, ಪಂಗಡಗಳ ಜನರಿಂದ ದೌರ್ಜನ್ಯ ಕುರಿತು ದೂರು ದಾಖಲಾದರೆ ಸಂಬಂಧಿಸಿದ ಅಧಿಕಾರಿಗಳು ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಎಸ್‌ಸಿ, ಎಸ್‌ಟಿ ದೌರ್ಜನ್ಯ ನಿಯಂತ್ರಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಾಜದಲ್ಲಿ ಪರಸ್ಪರ ಸಾಮರಸ್ಯದಿಂದ ಬದುಕುವ ರೀತಿಯ ವ್ಯವಸ್ಥೆ ಕಾಪಾಡಿಕೊಳ್ಳಬೇಕು. ಸಮಸ್ಯೆಗಳು ಕಂಡು ಬಂದಾಗ ತಕ್ಷಣ ಕ್ರಮ ವಹಿಸುವ ಮೂಲಕ ಆರಂಭದಲ್ಲಿಯೇ ಪರಿಹಾರ ನೀಡಬೇಕು. ದೌರ್ಜನ್ಯ ದೂರು ಬರದಂತೆ ವಾತಾವರಣ ನಿರ್ಮಿಸಬೇಕು. ದೂರು ದಾಖಲಾದರೆ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಬೇಕು. ನಿರಾಸಕ್ತಿ ತೋರಿದರೆ ಸೂಕ್ತ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.

ಜಿಪಂ ಸಿಇಒ ರಾಹುಲ ಶಿಂಧೆ ಮಾತನಾಡಿ, ತುರ್ತು ಸಂದರ್ಭಗಳಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ತಕ್ಷಣ ಚಿಕಿತ್ಸೆ ಆರಂಭಿಸಬೇಕು. ಹೊರಗುತ್ತಿಗೆ ನೌಕರರ ನೇಮಕಾತಿಯಲ್ಲಿ ಮೀಸಲಾತಿ ನಿಯಮ ಪಾಲನೆ ಆಗಬೇಕು. ಪ್ರಾಂಶುಪಾಲರ ಹುದ್ದೆಯ ಪ್ರಭಾರ ವಹಿಸಿ ಕೊಡುವ ವಿಷಯಗಳಲ್ಲಿ ಕಿರುಕಳ ನೀಡುವಂತಿಲ್ಲ. ಈ ಕುರಿತು ದೂರು ಬಂದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ನಗರ ಪೊಲೀಸ್ ಆಯುಕ್ತ ಇಡಾ ಮಾರ್ಟಿನ್ ಮಾರ್ಬನ್ಯಾಂಗ್ ಮಾತನಾಡಿ, ಜಿಲ್ಲೆಯಲ್ಲಿ ಮಾದಕ ವಸ್ತುಗಳ ಮಾರಾಟ ಹಾಗೂ ವ್ಯಸನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಸೂಕ್ಷ್ಮ ಸ್ಥಳಗಳನ್ನು ಗುರುತಿಸಿ, ಪರಿಶೀಲನೆ ನಡೆಸಲಾಗುವುದು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಉಪ ವಿಭಾಗಾಧಿಕಾರಿಗಳಾದ ಶ್ರವಣ ನಾಯಕ, ಪ್ರಭಾವತಿ ಫಕೀರಪುರ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಮನಗೌಡ ಕನ್ನೋಳ್ಳಿ, ಪರಿಶಿಷ್ಟ ವರ್ಗದ ಕಲ್ಯಾಣಾಧಿಕಾರಿ ಬಸವರಾಜ ಕುರಿಹುಲಿ, ಜಿಲ್ಲಾ ದೌರ್ಜನ್ಯ ಸಮಿತಿ ನಾಮನಿರ್ದೇಶಿತ ಸದಸ್ಯರಾದ ಕರೆಪ್ಪ ಗುಡೆನ್ನವರ, ವಿಜಯ ತಳವಾರ, ಬಸಪ್ಪ ತಳವಾರ, ಬಸವರಾಜ ಪಾಯಟ್ಟಿ, ನಾಗಪ್ಪ ನರಗಟ್ಟಿ, ಮಲ್ಲೇಶ ಚೌಗಲೆ ಇತರರು ಇದ್ದರು.

ವಾಲ್ಮೀಕಿ ಜಯಂತಿ ಆಚರಣೆಗೆ ಸಿದ್ಧತೆ

ಅಕ್ಟೋಬರ್ 17 ರಂದು ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾ ಮಟ್ಟದಲ್ಲಿ ವಿಜೃಂಭಣೆಯಿಂದ ಆಚರಿಸಲು ಸಿದ್ಧತೆ ಮಾಡಿಕೊಳ್ಳಬೇಕು. ಸಂಗೊಳ್ಳಿ ರಾಯಣ್ಣನೊಂದಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಮರಣ ದಂಡನೆ ಹಾಗೂ ಜೀವಾವಧಿ ಶಿಕ್ಷೆಗೆ ಗುರಿಯಾದ ಸಮುದಾಯಗಳ ನಾಯಕರ ಹೆಸರುಗಳನ್ನು ಕಾರ್ಯಕ್ರಮದ ವೇದಿಕೆಗೆ ಇಡಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net