ಬ್ರಾಹ್ಮಣರ ಮೇಲಿನ ದೌರ್ಜನ್ಯ ಖಂಡನೀಯ

Ylp Manavi
Published on

ಯಲ್ಲಾಪುರ: ಶಿವಮೊಗ್ಗ, ಬೀದರ್ ಹಾಗೂ ಧಾರವಾಡದಲ್ಲಿ ಸಿಇಟಿ ಪರೀಕ್ಷೆ ಬರೆಯಲು ಬಂದ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ಕತ್ತರಿಸಿದ ಘಟನೆ ಖಂಡಿಸಿ, ಪಟ್ಟಣದಲ್ಲಿ ತಾಲೂಕು ಹವ್ಯಕ ಸಂಘ ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಅಂಬೇಡ್ಕರ್ ಸರ್ಕಲ್ನಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ತಹಸೀಲ್ದಾರ್ ಕಚೇರಿಯ ಎದುರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ಪತ್ರಕರ್ತ ಹರಿಪ್ರಕಾಶ ಕೋಣೆಮನೆ, ಬ್ರಾಹ್ಮಣ ಎನ್ನುವುದು ಒಂದು ಜಾತಿಯಲ್ಲ. ಅದೊಂದು ಸಂಸ್ಕಾರ. ಭಾರತೀಯ ಸಂಸ್ಕೃತಿ, ನಂಬಿಕೆಯ ತಳಪಾಯವೇ ಬ್ರಾಹ್ಮಣರು. ಅವರನ್ನು ಕೆಣಕುವ ಹುನ್ನಾರ ನಡೆದಿದೆ. ನಾವು ಶಾಸ್ತ್ರ ಹೇಳಲೂ ಬಲ್ಲೆವು, ಅಗತ್ಯ ಬಿದ್ದರೆ ಶಸ್ತ್ರ ಹಿಡಿಯಲೂ ಬಲ್ಲೆವು. ಬ್ರಾಹ್ಮಣರ ಆಕ್ರೋಶದ ಕಟ್ಟೆ ಒಡೆದರೆ ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

ಘಟನೆ ನಡೆದು ಒಂದು ವಾರ ಕಳೆದರೂ ಮುಖ್ಯಮಂತ್ರಿಗಳು ಕನಿಷ್ಠ ಕ್ಷಮೆ ಕೇಳುವ ಸೌಜನ್ಯವನ್ನೂ ತೋರದಿರುವುದು ವಿಷಾದದ ಸಂಗತಿ. ತೋರಿಕೆಗಾಗಿ ಕೆಳಹಂತದ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಘಟನೆಗೆ ಕಾರಣರಾದ ಹಿರಿಯ ಅಧಿಕಾರಿಗಳ ತಲೆದಂಡವಾಗಬೇಕು ಎಂದು ಆಗ್ರಹಿಸಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ತಾಲೂಕು ಅಧ್ಯಕ್ಷ ಶಂಕರ ಭಟ್ಟ ತಾರೀಮಕ್ಕಿ, ತಾಲೂಕು ಹವ್ಯಕ ಸಂಘದ ಅಧ್ಯಕ್ಷ ಡಿ.ಶಂಕರ ಭಟ್ಟ, ಪ್ರಮುಖರಾದ ಪ್ರಮೋದ ಹೆಗಡೆ, ಡಾ. ರವಿ ಭಟ್ಟ ಬರಗದ್ದೆ ಇತರರು ಮಾತನಾಡಿದರು.

ಸಮಾಜದ ಮುಖಂಡರಾದ ಜಿ.ಎನ್. ಹೆಗಡೆ ಹಿರೇಸರ, ಗೋಪಾಲಕೃಷ್ಣ ಗಾಂವ್ಕರ, ಎಂ.ಆರ್. ಹೆಗಡೆ, ಶ್ರೀರಂಗ ಕಟ್ಟಿ, ಸುಬ್ರಹ್ಮಣ್ಯ ಹೆಗಡೆ, ಡಿ.ಜಿ.ಹೆಗಡೆ, ವೆಂಕಟರಮಣ ಬೆಳ್ಳಿ, ಗಣಪತಿ ಮಾನಿಗದ್ದೆ, ಈಶ್ವರದಾಸ ಕೊಪ್ಪೆಸರ, ಪ್ರಶಾಂತ ಹೆಗಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net