ಪಶುಪತಿಹಾಳದಲ್ಲಿ ಜಾತ್ರಾಮಹೋತ್ಸವ ಇಂದಿನಿಂದ

5-Saunshi-1,,,
Published on

ಸಂಶಿ: ಮೃತ್ಯುಂಜಯಪ್ಪಗಳವರ 57ನೇ ಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವ ಮಾ. 6 ರಿಂದ 8 ರವರೆಗೆ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳವರ ನೇತೃತ್ವದಲ್ಲಿ ನಡೆಯಲಿದೆ. ಒಂದು ವಾರದ ಕಾಲ ನಿಜಗುಣ ಶಿವಯೋಗಿಯ ‘ಕೈವಲ್ಯ ಪದ್ಧತಿ’ ವಿಷಯವಾಗಿ ಶಿಗ್ಲಿ ವಿರಕ್ತಮಠದ ಚನ್ನವೀರ ಶ್ರೀಗಳು ಪ್ರವಚನ ನೀಡಿದ್ದಾರೆ. ಮಾ.6 ರಂದು ಬೆಳಗ್ಗೆ 9 ಗಂಟೆಗೆ ಷಟ್​ಸ್ಥಲ ಧ್ವಜಾರೋಹಣ ನೆರವೇರಲಿದೆ. ಸಂಜೆ 7.30ಕ್ಕೆ ಜಾತ್ರಾ ಮಹೋತ್ಸವ ಉದ್ಘಾಟನೆಗೊಳ್ಳಲಿದೆ. ಮಾ. 7 ಸಂಜೆ 4 ಗಂಟೆಗೆ ಸಕಲ ವಾದ್ಯಗಳೊಂದಿಗೆ ತ್ರಿವಿಧ ದಾಸೋಹಮೂರ್ತಿ ಲಿಂ.ಶ್ರೀ ಮೃತ್ಯುಂಜಯಪ್ಪಗಳವರ ಮಹಾ ರಥೋತ್ಸವ ಜರುಗುವುದು. ಸಂಜೆ 7ಕ್ಕೆ ಮೃತ್ಯುಂಜಯಪ್ಪಗಳವರ 57ನೇ ಸ್ಮರಣೋತ್ಸವ ನಡೆಯಲಿದೆ. ಮಾ.8 ರಂದು ಸಂಜೆ 5.30ಕ್ಕೆ ಮಲ್ಲಿಕಾರ್ಜುನ ಮಹಾಸ್ವಾಮಿಗಳವರಿಂದ ಕಡುಬಿನ ಕಾಳಗ, 7 ಗಂಟೆಗೆ ಪೂಜ್ಯ ಲಿಂ.ಶ್ರೀ ಮಹಾಂತಪ್ಪಗಳವರ 28ನೇ ಸ್ಮರಣೋತ್ಸವ ನಡೆಯಲಿದೆ.

ಪಾವನ ತಾಣವಾದ ಕತೆ: ಲೋಕ ಕಲ್ಯಾಣಾರ್ಥವಾಗಿ ಕ್ಷೇತ್ರ ಸಂಚಾರ ಮಾಡುತ್ತ ಬಾಲಲೀಲಾ ಮಹಾಂತ ಶಿವಯೋಗಿಗಳು ಪಶುಪತಿಹಾಳದ ಹೊರಭಾಗದ ಜಮೀನಿನಲ್ಲಿ ಬನ್ನಿ ಮರದ ಕೆಳಗೆ ಕುಳಿತುಕೊಂಡು ವಿಶ್ರಾಂತಿ ಪಡೆಯುತ್ತಾರೆ. ತಮ್ಮ ಜಮೀನಿನಲ್ಲಿ ಮಹಾತ್ಮರು ವಿಶ್ರಾಂತಿ ಪಡೆದ ವಿಷಯ ತಿಳಿದು ಮಾಲೀಕರಾದ ಕಟಗಿ ಮನೆತನದವರು ಹರ್ಷಿತರಾಗಿ ಹೊಲದಲ್ಲಿ ಮಹಾಂತ ಶಿವಯೋಗಿಗಳು ಕುಳಿತ ಸ್ಥಳವನ್ನು ಯಾರು ತುಳಿಯಬಾರದೆಂದು ಅಲ್ಲಿ ಒಂದು ಕಲ್ಲಿಟ್ಟು ಆರಾಧಿಸುತ್ತಾರೆ.

ಮುಳಗುಂದದ ಶ್ರೀ ಬಸವಲಿಂಗ ಸ್ವಾಮಿಗಳು ಈ ಊರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಇಂತಹ ಪವಿತ್ರ ಸ್ಥಳದಲ್ಲಿ ಗದ್ದುಗೆ ನಿರ್ವಣಗೊಳ್ಳಲಿ ಎಂದು ಹೇಳುತ್ತಾರೆ. ಕೆಲ ವರ್ಷಗಳ ಬಳಿಕ ಮುರುಘಾಮಠದ ಮೃತ್ಯುಂಜಯಪ್ಪಗಳವರು ಈ ಗದ್ದುಗೆಗೆ ನೆರಳು ಒದಗಿಸಿ ಚಿಕ್ಕಮಠವನ್ನಾಗಿ ಮಾರ್ಪಡಿಸಿ ಜತೆಗೆ ವಸತಿಗೆ ನಾಲ್ಕಾರು ಕೊಠಡಿ ನಿರ್ವಿುಸುತ್ತಾರೆ. ಅಂದಿನಿಂದ ಇದು ಪಾವನ ಸ್ಥಳವಾಗಿ ಮಾರ್ಪಟ್ಟಿದೆ.

ಮಹಾಂತಪ್ಪನವರು ಜನಿಸಿದ ಪುಣ್ಯಭೂಮಿ: ಪಶುಪತಿ ಹಾಳದ ಹಿರೇಮಠದ ಶಿವಸಂಗಯ್ಯ- ಕರಿಬಸಮ್ಮ ದಂಪತಿಯ ಪುತ್ರ ಮಹಾಂತಪ್ಪನವರು ಪವಾಡ ಪುರುಷರು. ಮುಳಗುಂದದ ಅಂದಿನ ಪೀಠಾಧ್ಯಕ್ಷರು ಶರಣ ದಂಪತಿಗೆ ಗರ್ಭಾವಸ್ಥೆಯಲ್ಲಿದ್ದಾಗಲೇ ನಿಮ್ಮ ಮಗುವನ್ನು ನಮ್ಮ ಮಠಕ್ಕೆ ಕೊಡಬೇಕೆಂದು ಸೂಚಿಸಿದ್ದರಂತೆ. ಮುಂದೆ ಮೃತುಂಜಯಪ್ಪನವರು ಮಹಾಂತಪ್ಪನವರನ್ನು ಶಿಷ್ಯರನ್ನಾಗಿಸಿಕೊಂಡರು.

ಅಪ್ಪಗಳ ಪವಾಡ: ಒಮ್ಮೆ ಪಶುಪತಿಹಾಳದಲ್ಲಿ ಮಳೆ ಸುರಿಯಲ್ಲಿಲ್ಲ. ಜನ-ಜಾನುವಾರುಗಳಿಗೆ ನೀರಿಲ್ಲದಂತಾಗಿ ಕೆರೆಗಳೆಲ್ಲ ಬತ್ತಿ ಹೋದವು. ಮಳೆಗಾಗಿ ಭಜನೆ, ಸಪ್ತಾಹ, ಅನ್ನದಾಸೋಹ ಮಾಡಿದರೂ ಮೇಘರಾಜನ ಕೃಪೆ ಯಾಗಲಿಲ್ಲ. ಚಿಂತಾಕ್ರಾಂತರಾದ ಜನರು ಮುಳಗುಂದದ ಮಹಾಂತ ಮರಿ ದರ್ಶನ ಪಡೆದು ನಮ್ಮೂರಿಗೆ ಮಳೆ ಸುರಿಯುತ್ತಿಲ್ಲ ಎಂದು ಕಣ್ಣೀರಿಟ್ಟರು. ನಾಳೆ ಬೆಳಕಾಗುವುದರೊಳಗೆ ಉತ್ತಮ ಮಳೆಯಾಗುತ್ತದೆ ಎಂದು ಭಕ್ತರನ್ನು ಕಳುಹಿಸಿದರು. ರಾತ್ರಿ ಎರಡು ಗಂಟೆಗೆ ಸುಮಾರಿಗೆ ಮಳೆ ಸುರಿದು ಕೆರೆಗಳೆಲ್ಲ ತುಂಬಿ ಕೋಡಿ ಬಿದ್ದವು. ಆಗ ಭಕ್ತರು ಮಹಾಂತವಾಣಿ ಸುಳ್ಳಾಗಲಿಲ್ಲ ಎಂದು ಕೊಂಡಾಡಿದರು.

ಪ್ರಗತಿಯಲ್ಲಿ ಸ್ಮಾರಕ ಭವನ

ಮೃತ್ಯುಂಜಯಪ್ಪಗಳವರ ಲಿಂಗೈಕ್ಯರಾದ ಬಳಿಕ ಮಹಾಂತಪ್ಪನವರು ಚಿಕ್ಕಮಠವನ್ನು ಸುತ್ತಲಿನ ಭಕ್ತರು ಹಾಗೂ ಗ್ರಾಮಸ್ಥರ ಸಹಕಾರದಿಂದ ಸುಂದರ ಕಟ್ಟಡ ನಿರ್ವಿುಸಿ ಬಾಲಲೀಲಾ ಮಹಾಂತ ಶಿವಯೋಗಿಗಳ ಅಸ್ತಿತ್ವ ಉಳಿಸಿದ್ದಾರೆ. ಗ್ರಾಮದ ಜಾವೂರ ಈಶ್ವರಪ್ಪನವರ ನೆರವಿನಿಂದ ಗಡ್ಡಿ ತೇರು ನಿರ್ವಿುಸಿ ನೆತ್ತಿಗೆ ಶಿವಜ್ಞಾನ ನೀಡುವ ಜಾತ್ರೆಯನ್ನಾಗಿ ಆರಂಭಿಸುತ್ತಾರೆ. ಇಂದಿನ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಸಭಾಭವನ ನಿರ್ವಿುಸಿದ್ದಾರೆ. ಸ್ಮಾರಕ ಭವನ ನಿರ್ಮಾಣ ಕೈಗೊಂಡಿದ್ದು, ಪ್ರಗತಿ ಹಂತದಲ್ಲಿದೆ.

ಉಭಯ ಶ್ರೀಗಳ ಕೃಪಾಶೀರ್ವಾದ ಜತೆಗೆ ಭಕ್ತರ ನಿರಂತರ ದಾನ, ಧರ್ಮ, ಭಕ್ತಿಸೇವೆಗಳಿಂದ ಪಶುಪತಿಹಾಳದ ಶ್ರೀ ಮೃತ್ಯುಂ ಜಯಪ್ಪಗಳ ಜಾತ್ರಾಮಹೋತ್ಸವ ಐದು ದಶಕಗಳಿಂದ ವಿಜೃಂಭಣೆಯಿಂದ ಸಾಗಿ ಬಂದಿದೆ. ಮಹಾತ್ಮರ ಸತ್ಸಂಗಗಳಲ್ಲಿ ಎಲ್ಲರೂ ಪಾಲ್ಗೊಂಡು ಪುನೀತರಾಗಬೇಕು.| ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮುರುಘಾಮಠ ಧಾರವಾಡ

ಮಹಾಂತಪ್ಪನವರು ಜನಿಸಿದ ಪಾವನಕ್ಷೇತ್ರದಲ್ಲಿ ಹಲವು ದಶಕಗಳಿಮದ ಸದ್ಗುರುವಿನ ಕೃಪೆಯಿಂದ ನಡೆದುಕೊಂಡು ಬರುತ್ತಿರುವ ಈ ಜಾತ್ರಾ ಮಹೋತ್ಸವ ಎಲ್ಲೆಡೆ ಗುರು ಪರಂಪರೆಯ ಸಂದೇಶ ಸಾರುತ್ತಿದೆ. | ಮೃತ್ಯುಂಜಯ ಈಶ್ವರಪ್ಪ ಜಾವೂರ ಗಡ್ಡಿ ತೇರು ನಿರ್ವಿುಸಿದ ಕುಟುಂಬಸ್ಥರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net