ಆಟೋ ರಿಕ್ಷಾ ಚಾಲಕರನ್ನು ಕಾರ್ಮಿಕರು ಎಂದು ಪರಿಗಣಿಸದಿದ್ದಲ್ಲಿ ಹೋರಾಟ

Ato press meet
Published on

ಕಾರವಾರ: ಆಟೋ ರಿಕ್ಷಾ ಚಾಲಕರನ್ನು ವಾರದಲ್ಲಿ ಕಾರ್ಮಿಕರ ಕಾರ್ಡ್ ನೀಡದೇ ಇದ್ದಲ್ಲಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಯಲಿದೆ ಎಂದು ಉತ್ತರ ಕರ್ನಾಟಕ ಆಟೋ‌ ರಿಕ್ಷಾ ಚಾಲಕರ‌ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಅವರು ಮಾತನಾಡಿದರು. ಶ್ರಮ ಪಟ್ಟ ಚಾಲಕರ ದುಡಿಮೆಯಿಂದ ವಿವಿಧ ಕರ‌ ಸಂಗ್ರಹಿಸುವ ಸರ್ಕಾರ ಆಟೋ‌ ಚಾಲಕರಿಗೆ ಸೌಲಭ್ಯ ನೀಡುತ್ತಿಲ್ಲ. ಚಾಲಕರು ದುಡಿದದ್ದು, ಇಂಧನಕ್ಕೆ ಖರ್ಚಾಗುತ್ತಿದೆ. ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ.
ಶಕ್ತಿ ಯೋಜನೆ ಜಾರಿಯಾಗಿದ್ದರಿಂದ ಆಟೋ ಬಾಡಿಗೆ ಕಡಿಮೆಯಾಗಿದೆ. ಆಟೋಗಳ ಸಂಚಾರಕ್ಕೆ 20 ಕಿಮೀ ಮಿತಿ ಹೇರಲಾಗಿದೆ ಎಂದು ಗೋಳು ಹೇಳಿಕೊಂಡರು.
ಹಿಂದಿನ ಸರ್ಕಾರ ಆಟೋ‌ಚಾಲಕರನ್ನು ಅಸಂಘಟಿತ ವಲಯಕ್ಕೆ ಸೇರ್ಪಡೆ ಮಾಡಿ ಇ-ಶ್ರಮ ಕಾರ್ಡ್ ಕೊಟ್ಟಿತು. ಆದರೆ, ಯಾವುದೇ ಪ್ರಯೋಜನ ದೊರೆತಿಲ್ಲ ಎಂದರು.
ಉತ್ತರ ಕನ್ನಡ ಜಿಲ್ಲಾ ಆಟೋ ರಿಕ್ಷಾ ಚಾಲಕರ, ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ‌ ಶಿವರಾಜ ಮೇಸ್ತ ಮಾತನಾಡಿ , ರಾಜ್ಯದಲ್ಲಿ 10 ಲಕ್ಷ ಆಟೋ ರಿಕ್ಷಾ ಚಾಲಕರಿದ್ದಾರೆ. ಆದರೆ, ಆರ್ಥಿಕ ಸಂಕಷ್ಟದಿಂದ ಜೀವನ ನಡೆಸಲಾರದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ನಮಗೆ ಬೇರೆ ಗ್ಯಾರಂಟಿ ಬೇಡ ನಮ್ಮನ್ನು ಕಾರ್ಮಿಕರ ವಲಯಕ್ಕೆ ಸೇರಿಸಿ, ಕಟ್ಟಡ ಕಾರ್ಮಿಕರಿಗೆ ನೀಡುವ ಸೌಲಭ್ಯ ನೀಡಬೇಕು ಎಂಬುದು ನಮ್ಮ ಒತ್ತಾಯ. ಕೆಲ ತಿಂಗಳ ಹಿಂದೆ ಗದಗದಲ್ಲಿ ದೊಡ್ಡ ಸಮಾವೇಶ ಮಾಡಿ‌ ಸರ್ಕಾರಕ್ಕೆ ಮನವಿ ಮಾಡಿದ್ದೆವು. ಈ ಬಜೆಟ್ ನಲ್ಲಿ ಸೇರಿಸಲಾಗುವುದು ಆಟೋ ಚಾಲಕರಿಗಾಗಿ 300 ಕೋಟಿ ರೂ. ಇಡಲಾಗಿದೆ ಎಂದು ಸಚಿವ ಎಚ್.ಕೆ.ಪಾಟೀಲ ಅವರು ಭರವಸೆ ನೀಡಿದ್ದರು. ಆದರೆ, ಬಜೆಟ್ ನಲ್ಲಿ ಆಟೋ ಚಾಲಕರಿಗೆ ಯಾವುದೇ ಸೌಲಭ್ಯ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಜಿಲ್ಲಾ ಉಪಾಧ್ಯಕ್ಷ ವಿಶ್ವನಾಥ ಗೌಡ ಮಾತನಾಡಿ, ನಮ್ಮ ಬೇಡಿಕೆಗಳಿಗಾಗಿ ಎಲ್ಲ ಪಕ್ಷದ ಶಾಸಕರಿಗೆ ಮನವಿ ಮಾಡಿದ್ದೇವೆ. ಆದರೆ, ಮನವಿಗೆ ಸ್ಪಂದನೆ ದೊರೆತಿಲ್ಲ. ಚುನಾವಣೆ ಬಂದಾಗ ಖಾಕಿ ಶರ್ಟ್ ಹಾಕಿ ಆಟೋ‌ ರಿಕ್ಷಾ ಓಡಿಸುತ್ತಾರೆ. ಆದರೆ, ನಮ್ಮ ಸಂಕಷ್ಟ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದರು. ಪ್ರಧಾನ‌ಕಾರ್ಯದರ್ಶಿ ಉದಯ ನಾಯ್ಕ, ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ರಾಘು ಮಾಯ್ಕ, ಇದ್ದರು. ಚಂದ್ರಹಾಸ ನಾಯ್ಕ ಕುಮಟಾ, ಪ್ರಶಾಂತ ದೇಸಾಯಿ, ಗುರು ಬೆಟಗೇರಿ ಹುಬ್ಬಳ್ಳಿ, ಸಾದಿಕ್‌ ಸುದ್ದಿಗೋಷ್ಠಿಯಲ್ಲಿದ್ದರು‌.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net