ನಗರದಲ್ಲಿ ಬಂದ್ ವಾತಾವರಣ

16HSN2
Published on

ಹಾಸನ: ಸಾಕಷ್ಟು ಮುಂಜಾಗ್ರತಾ ಕ್ರಮಗಳ ನಡುವೆಯೂ ವ್ಯಾಪಕವಾಗಿ ಕರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಆತಂಕಗೊಂಡಿರುವ ಜನರು ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ.

ಯಾವಾಗಲೂ ಜನಜಂಗುಳಿಯಿಂದ ತುಂಬಿರುತ್ತಿದ್ದ ಮಾರುಕಟ್ಟೆ, ಮುಖ್ಯ ರಸ್ತೆ, ಅಂಗಡಿಗಳು ಬೀಕೋ ಎನ್ನುತ್ತಿವೆ. ನಗರ ಸೇರಿದಂತೆ ಜಿಲ್ಲಾದ್ಯಂತ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ. ಶಾಲಾ-ಕಾಲೇಜುಗಳಿಗೆ ರಜೆ, ಚಿತ್ರಮಂದಿರಗಳ ಬಂದ್ ಮಾಡಿದ್ದು ಹಾಗೂ ಬೀದಿ ಬದಿ ಕ್ಯಾಂಟೀನ್‌ಗಳು ಬಾಗಿಲು ಹಾಕಿರುವುದರಿಂದ ನಗರ ಸ್ತಬ್ಧವಾಗಿದೆ. ಮಾರಕ ಕರೊನಾದಿಂದಾಗಿ ಸರ್ಕಾರಿ ಕಚೇರಿಗಳಿಗೂ ಜನರು ಬರುತ್ತಿಲ್ಲ.

ಮಾರುಕಟ್ಟೆ ಖಾಲಿ ಖಾಲಿ: ನಗರದ ಕಟ್ಟಿನಕೆರೆ ಮಾರುಕಟ್ಟೆ ಎಂದರೆ ಯಾವಾಗಲೂ ಜನಸಂದಣಿಯ ಪ್ರದೇಶ ಎಂಬ ಮಾತಿದೆ. ಹೀಗಾಗಿ ಬೈಕ್, ಆಟೋಗಳು ಅಲ್ಲಿ ಸಂಚರಿಸುವುದು ದುಸ್ಸಾಹಸದ ಕೆಲಸ ಎನ್ನುವಂತಿತ್ತು. ಆದರೆ ಈಗ ಮಾರುಕಟ್ಟೆಯಲ್ಲಿ ಜನರಿಲ್ಲದೆ ವ್ಯಾಪಾರಿಗಳು ಖಾಲಿ ಕೂರುವಂತಾಗಿದೆ. ಮಾರಕ ಕರೊನಾ ಸೋಂಕಿಗೆ ಹೆದರಿರುವ ನಾಗರಿಕರು ಸಂತೆ ಪ್ರದೇಶಕ್ಕೂ ಬರುತ್ತಿಲ್ಲ. ಕಸ್ತೂರಬಾ, ವಲ್ಲಭಬಾಯಿ ರಸ್ತೆ, ಸುಭಾಷ್ ಚೌಕ ರಸ್ತೆಗಳು ಜನರಿಲ್ಲದೆ ಬೀಕೋ ಎನ್ನುತ್ತಿವೆ. ತರಕಾರಿ, ಹೂವು, ಹಣ್ಣುಗಳ ಬೆಲೆಯಲ್ಲೂ ಮೊದಲಿಗಿಂತ ಕಡಿಮೆಯಾಗಿದೆ.

ಕತ್ತರಿಸಿದ ಹಣ್ಣು ಮಾರಾಟಕ್ಕಿಲ್ಲ: ರಸ್ತೆ ಬದಿ ಕ್ಯಾಂಟೀನ್‌ಗಳ ಬಾಗಿಲು ಹಾಕಿಸಿದ್ದ ನಗರಸಭೆ ಕಲ್ಲಂಗಡಿ ಸೇರಿದಂತೆ ಇತರ ಹಣ್ಣು ಪದಾರ್ಥಗಳ ಮಾರಾಟಕ್ಕೆ ವಿನಾಯಿತಿ ನೀಡಿತ್ತು. ಆದರೆ ಈಗ ಕತ್ತರಿಸಿದ ಹಣ್ಣುಗಳ ಮಾರಾಟಕ್ಕೆ ನಿರ್ಬಂಧ ಹೇರಿದೆ. ಹಣ್ಣಿನ ವ್ಯಾಪಾರಿಗಳು ಇದರಿಂದ ನಷ್ಟ ಅನುಭವಿಸುವಂತಾಗಿದೆ.

ಮಂಗಳವಾರ ಸಂತೆ ಬಂದ್: ಜನರು ಒಟ್ಟಾಗಿ ನಿಲ್ಲಬಾರದು ಎಂಬ ಕಾರಣದಿಂದ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಪಡಿಸಿರುವ ಜಿಲ್ಲಾಡಳಿತ ಮಂಗಳವಾರದ ಸಂತೆಗೂ ಬ್ರೇಕ್ ಹಾಕಿದೆ. ನಗರದ ಆರ್‌ಸಿ ರಸ್ತೆಯಲ್ಲಿ ಪ್ರತಿ ಮಂಗಳವಾರ ವಾರದ ಸಂತೆ ನಡೆಯುತ್ತದೆ. ಕರೊನಾ ಕಟ್ಟೆಚ್ಚರದಿಂದಾಗಿ ಸಂತೆ ರದ್ದುಪಡಿಸಲಾಗಿದೆ. ಸಂತೆ ಬಂದ್‌ನ ವಿಷಯ ತಿಳಿಯದ ತರಕಾರಿ, ಹಣ್ಣು ಮಾರಾಟಕ್ಕೆ ಗ್ರಾಮೀಣ ಭಾಗದಿಂದ ವ್ಯಾಪಾರಿಗಳು ಬರುವ ಸಾಧ್ಯತೆಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net