ಆತ್ಮನಿರ್ಭರ ಸಂಕಲ್ಪ ಸಮಾಜಮುಖಿಯಾಗಿದೆ, ಯೋಗಾನುಸಂಧಾನ ಸಂಸ್ಥಾನದ 18ನೇ ಪದವಿ ಪ್ರಧಾನ ಸಮಾರಂಭದಲ್ಲಿ ಪದ್ಮಶ್ರೀ ಡಾ.ವಿ.ಆರ್.ಗೌರಿಶಂಕರ್ ಅಭಿಮತ

jigani
Published on

ಆನೇಕಲ್: ಪ್ರಧಾನಿ ಮೋದಿ ಅವರ ಆತ್ಮನಿರ್ಭರ ಸಂಕಲ್ಪ ಸಮಾಜಮುಖಿಯಾಗಿದೆ ಎಂದು ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಪೀಠದ ಮುಖ್ಯ ಕಾರ್ಯನಿರ್ವಾಹಕ ಪದ್ಮಶ್ರೀ ಡಾ.ವಿ.ಆರ್.ಗೌರಿಶಂಕರ್ ಹೇಳಿದ್ದಾರೆ.

ಜಿಗಣಿಯ ಎಸ್.ವ್ಯಾಸ ಯೋಗ ಅನುಸಂಧಾನ ಸಂಸ್ಥಾನದ 18ನೇ ಪದವಿ ಪ್ರಧಾನ ಸಮಾರಂಭದಲ್ಲಿ ಮಂಗಳವಾರ ಮಾತನಾಡಿದರು.

ಸನಾತನ ಹಿಂದು ಧರ್ಮದ ಮೌಲ್ಯಗಳು ವಿಶೇಷವಾಗಿದ್ದು ಶಂಕರಾಚಾರ್ಯರು ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದಾರೆ. ಅದೇ ಮಾರ್ಗದಲ್ಲಿ ಸ್ವಾಮಿ ವಿವೇಕಾನಂದರ ಆಶಯಗಳ ಪ್ರತಿಪಾದನೆಯೂ ವಿಶ್ವಾದ್ಯಂತ ನಿರಂತರ ನಡೆಯುತ್ತಿದೆ ಎಂದರು.

ಕರ್ನಾಟಕ ಮತ್ತು ಗೋವಾ ರಾಜ್ಯ ಆದಾಯ ತೆರಿಗೆ ಮುಖ್ಯ ಆಯುಕ್ತ ರವಿಶಂಕರ್ ಮಾತನಾಡಿ, ದೇಶ ವಿದೇಶಗಳಲ್ಲಿ ಯೋಗ ಪರಿಚಯಿಸುವ ಮೂಲಕ ಭಾರತ ವಿಶ್ವ ನಾಯಕನ ಪಟ್ಟ ಅಲಂಕರಿಸಿದೆ ಎಂದರು. ದೇಶೀಯವಾಗಿ ತಯಾರಾಗುವ ಎಲ್ಲ ವಸ್ತುಗಳಿಗೂ ಅದರದೇ ಮಾನ್ಯತೆಯಿದ್ದು, ಸ್ವಾವಲಂಬಿ ರಾಷ್ಟ್ರದ ಪರಿಕಲ್ಪನೆಗೆ ಸಹಕಾರಿಯಾಗಲಿದೆ ಎಂದರು.

ಎಸ್.ವ್ಯಾಸ ವಿವಿಯ ಕುಲಪತಿ ಪದ್ಮಶ್ರೀ ಡಾ.ಎಚ್.ಆರ್.ನಾಗೇಂದ್ರ ಮಾತನಾಡಿ, ಔಷಧದ ವೆಚ್ಚ ತಗ್ಗಿ ಜನಸಾಮಾನ್ಯರ ಕೈಗೆಟುಕುವ ಬೆಲೆಯಲ್ಲಿ ಚಿಕಿತ್ಸೆ ದೊರೆಯುವಂತೆ ಮಾಡುವ ಸದುದ್ದೇಶದಿಂದ ಹಲವು ವಿಜ್ಞಾನಿಗಳು, ತಜ್ಞ ವೈದ್ಯರ ತಂಡ ವಿಶ್ವಮಟ್ಟದಲ್ಲಿ ಪ್ರಬಂಧ ಮಂಡಿಸಿದ್ದು ಎಲ್ಲವೂ ದಾಖಲೆಯಾಗಿದೆ ಎಂದರು.

ಚಂಡೀಗಢದ ನೇತ್ರ ವಿಭಾಗದ ನಿರ್ದೇಶಕ ಪ್ರೊ. ಜಗತ್‌ರಾಮ್, ಉಪ ಕುಲಪತಿ ಡಾ.ಬಿ.ಆರ್. ರಾಮಕೃಷ್ಣ, ರಿಜಿಸ್ಟ್ರಾರ್, ಡಾ. ಎಂ.ಕೆ.ಶ್ರೀಧರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net