ಎಟಿಎಂ ಸ್ಕಿಮ್ಮಿಂಗ್ ಗ್ರಾಹಕರಿಗೆ ಆತಂಕ

atm 1
Published on

ಅವಿನ್ ಶೆಟ್ಟಿ, ಉಡುಪಿ

ಬೆಂಗಳೂರು, ಚೆನ್ನೈಯಂತಹ ಮಹಾನಗರಗಳಲ್ಲಿ ನಡೆಯುತ್ತಿದ್ದ ಎಟಿಎಂ ಸ್ಕಿಮ್ಮಿಂಗ್ ಹೈಟೆಕ್ ವಂಚನೆ ಜಾಲ ಕರಾವಳಿಯಲ್ಲಿಯೂ ವ್ಯಾಪಿಸಿದ್ದು, ಬಳಕೆದಾರರಿಗೆ ಎಟಿಎಂ ಸುರಕ್ಷತೆ ಆತಂಕ ಎದುರಾಗಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಸ್ಕಿಮ್ಮಿಂಗ್ ವಂಚನೆ ಮೂಲಕ ಹಲವರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿ ಲಕ್ಷಾಂತರ ರೂ. ದೋಚಿರುವ ಪ್ರಕರಣಗಳು ವರದಿಯಾಗುತ್ತಿವೆ.

ಇತ್ತೀಚೆಗೆ ಮಂಗಳೂರು ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು. ಈ ಮಧ್ಯೆ ನಗರದ ಆದಿ ಉಡುಪಿ ಎಟಿಎಂನಿಂದ ಸ್ಕಿಮ್ಮಿಂಗ್ ಮೂಲಕ ಮೂವರ ಖಾತೆಯಿಂದ ಹಣ ದೋಚಿರುವ ಪ್ರಕರಣವೂ ತಡವಾಗಿ ಬೆಳಕಿಗೆ ಬಂದಿದೆ.

ಪ್ರಕರಣ ಮರುಕಳಿಸುತ್ತಿದ್ದರೂ ಬ್ಯಾಂಕ್‌ನವರು ನಿರ್ಲಕ್ಷೃ ವಹಿಸಿದ್ದಾರೆಯೇ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ. ನಗರ ಭಾಗದಲ್ಲಿ ಶೇ.50 ಬ್ಯಾಂಕ್‌ಗಳ ಎಟಿಎಂಗಳಲ್ಲಿ ಭದ್ರತಾ ಸಿಬ್ಬಂದಿ ಇಲ್ಲ. ಎಟಿಎಂ ತಂತ್ರಜ್ಞಾನ ಅಪ್‌ಡೇಟ್ ಮಾಡಿಲ್ಲ. ಇನ್ನೂ ಹಳೇ ಮಾದರಿಯ ಎಟಿಎಂ ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ ಎಂಬುದು ನಾಗರಿಕರ ದೂರು.

ಬಹುತೇಕ ಎಟಿಎಂಗಳಲ್ಲಿ ಒಂದು ದಿನ ಹಣವಿದ್ದರೆ, ಇನ್ನೊಂದು ದಿನ ಇರುವುದಿಲ್ಲ. ಕೆಲವು ತಾಂತ್ರಿಕ ಸಮಸ್ಯೆಗಳಿಂದ ಹಣವೂ ಬರುವುದಿಲ್ಲ. ಇದನ್ನೆಲ್ಲಾ ಬಂಡವಾಳವಾಗಿಸಿಕೊಳ್ಳುವ ಖದೀಮರು ಸ್ಕಿಮ್ಮಿಂಗ್ ಜಾಲ ವಿಸ್ತರಿಸಿಕೊಂಡು ಎಟಿಎಂಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ.

74 ಸಾವಿರ ರೂಪಾಯಿ ವಂಚನೆ

ಉಡುಪಿಯಲ್ಲಿ ಸೆನ್ ಅಪರಾಧ ಪೊಲೀಸರ ಪ್ರಕಾರ 2018-19ರಲ್ಲಿ ಏಳೆಂಟು ಪ್ರಕರಣ ವರದಿಯಾಗಿದ್ದವು. ಕರೊನಾ ಲಾಕ್‌ಡೌನ್ ಸಂದರ್ಭ ಈ ರೀತಿಯ ಅಪರಾಧ ಚಟುವಟಿಕೆ ನಡೆದಿರಲಿಲ್ಲ. ಇದೀಗ ಮತ್ತೆ ಮೂವರ ಖಾತೆಯಿಂದ ಹಣ ಲಪಟಾಯಿಸಲಾಗಿದೆ. ಅಬ್ದುಲ್ ಅರ್ಮಾನ್ ಎಂಬುವರ ಖಾತೆಯಿಂದ ಬೆಂಗಳೂರಿನ ಎಟಿಎಂಗಳ ಮೂಲಕ 25 ಸಾವಿರ ರೂ, ಸುಷ್ಮಾ ಎಂಬುವರ ಖಾತೆಯಿಂದ 6 ಸಾವಿರ ರೂ, ಮಂಗಳೂರು ಕೊಡಿಯಾಲ್‌ಬೈಲು ಎಟಿಎಂನಿಂದ ಮಹೇಶ್ ಸುವರ್ಣ ಎಂಬುವರ ಖಾತೆಯಿಂದ 33 ಸಾವಿರ ರೂ. ಹಣವನ್ನು ಖದೀಮರು ಡ್ರಾ ಮಾಡಲಾಗಿದೆ.

ಸಿಬ್ಬಂದಿ ಇಲ್ಲದ ಎಟಿಎಂ ಟಾರ್ಗೆಟ್

ಎಟಿಎಂ ಕಾರ್ಡ್ ಸ್ವೈಪ್ ಮಾಡುವ ಜಾಗದಲ್ಲಿ ಮೈಕ್ರೊ ಡಿವೈಸ್ ಮತ್ತು ಹಿಡನ್ ಕ್ಯಾಮೆರಾ ಅಳವಡಿಸಲಾಗುತ್ತದೆ. ಇದರಿಂದ ಗ್ರಾಹಕರ ಗೌಪ್ಯ ಸಂಖ್ಯೆ, ಕಾರ್ಡ್ ತಂತ್ರಾಂಶ ಕದಿಯಲಾಗುತ್ತದೆ. ಬಳಿಕ ನಕಲಿ ಕಾರ್ಡ್ ತಯಾರಿಸಿ ಅದಕ್ಕೆ ತಂತ್ರಾಶ ಸೇರಿಸಿ ಆಕ್ಟಿವ್ ಮಾಡಲಾಗುತ್ತದೆ. ಇದೆಲ್ಲವನ್ನು ಭದ್ರತಾ ಸಿಬ್ಬಂದಿ ಇಲ್ಲದ ಎಟಿಎಂಗಳಲ್ಲಿಯೇ ಮಾಡಲಾಗುತ್ತದೆ.

ಆರು ಹೊಸ ಪ್ರಕರಣ

ಉಡುಪಿ ನಗರ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಭಾನುವಾರ ಸ್ಕಿಮ್ಮಿಂಗ್ ವಂಚನೆ ಸಂಬಂಧ ಆರು ಪ್ರಕರಣಗಳು ದಾಖಲಾಗಿವೆ. ಮಂಗಳೂರು ಪೊಲೀಸರು ಇತ್ತೀಚೆಗೆ ಸ್ಕಿಮ್ಮಿಂಗ್ ಜಾಲದ ಅಪರಾಧಿಗಳನ್ನು ಬಂಧಿಸಿದ ಸುದ್ದಿ ತಿಳಿದ ನಂತರ ಆರು ಮಂದಿ ದೂರು ಸಹಿತ ಠಾಣೆ ಮೆಟ್ಟಿಲೇರಿದ್ದಾರೆ. ನಗರದ ನಿವಾಸಿಗಳಾದ ಪ್ರೀತಿ ಎಂ, ಮಸೂದ, ಫರ್ಜಾನ, ತನ್ವೀರ್ ಸುಲೇಮಾನ್, ಗೋಪಾಲಕೃಷ್ಣ ಎಸ್. ಕಿದಿಯೂರ್, ಶ್ರೀಪತಿ ಬಲ್ಲಾಳ್ ಅವರ ಖಾತೆಯಿಂದ ಹೊರ ಜಿಲ್ಲೆಯ ಎಟಿಎಂಗಳಲ್ಲಿ ಹಣ ಡ್ರಾ ಮಾಡಿ ವಂಚಿಸಲಾಗಿದೆ.

ಸ್ಕಿಮ್ಮಿಂಗ್ ಪ್ರಕರಣದ ಬಗ್ಗೆ ವಿಶೇಷ ತನಿಖೆ ನಡೆಯುತ್ತಿದೆ. ಮಂಗಳೂರು ಪೊಲೀಸರಿಂದಲೂ ಮಾಹಿತಿ ಪಡೆದುಕೊಂಡಿದ್ದೇವೆ ಎಂದು ಸೆನ್ ಅಪರಾಧ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ರಾಮಚಂದ್ರ ನಾಯಕ್ ತಿಳಿಸಿದ್ದಾರೆ. ಎಟಿಎಂಗಳಲ್ಲಿ ಭದ್ರತಾ ಸಿಬ್ಬಂದಿ ನೇಮಿಸುವಂತೆ, ಎಟಿಎಂ ಸುರಕ್ಷತೆ ಬಗ್ಗೆ ಗಮನ ಹರಿಸುವಂತೆ ಆಗಾಗ ಬ್ಯಾಂಕ್ ಮುಖ್ಯಸ್ಥರಿಗೆ ಪೊಲೀಸ್ ಇಲಾಖೆಯಿಂದ ಸೂಚನೆ ನೀಡಲಾಗುತ್ತಿದೆ ಎಂದರು.

ಸ್ಕಿಮ್ಮಿಂಗ್ ಪ್ರಕರಣಗಳಿಂದ ಸಾರ್ವಜನಿಕರು ಎಟಿಎಂ ಮೇಲಿನ ವಿಶ್ವಾಸ ಕಳೆದುಕೊಳ್ಳುತ್ತಾರೆ. ಎಟಿಎಂ ಬಳಕೆಗೆ ಭಯ ಪಡುವಂತಾಗುತ್ತದೆ. ಎಟಿಎಂ ಸುರಕ್ಷತೆ ಬಗ್ಗೆ ಬ್ಯಾಂಕಿಂಗ್ ವ್ಯವಸ್ಥೆ ಇನ್ನೂ ಹಳೆಯ ಮಾದರಿಯನ್ನೇ ಅನುಸರಿಸುತ್ತಿದೆ. ಬಹುತೇಕ ಎಟಿಎಂಗಳಲ್ಲಿ ಭದ್ರತಾ ಸಿಬ್ಬಂದಿ ಇಲ್ಲ. ಈ ರೀತಿ ಅಪರಾಧ ಪ್ರಕರಣ ತಡೆಯಲು ಕಾರ್ಡ್ ಹೊರತಾಗಿ ಒಟಿಪಿ, ಬೆರಳಚ್ಚು, ರೆಟಿನಾ ಸ್ಕಾೃನರ್ ತಂತ್ರಜ್ಞಾನದೊಂದಿಗೆ ಎಟಿಎಂ ಕೇಂದ್ರಗಳು ಅಪ್‌ಡೇಟ್ ಹೊಂದಬೇಕು.

ಶ್ರೀವತ್ಸ, ಉಡುಪಿ ಕುಂಜಿಬೆಟ್ಟು ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net