ಎಟಿಎಂ ಯಂತ್ರ ಮುರಿದು ದರೋಡೆ ಮಾಡಿದ್ದವರ ಸೆರೆ

KR-Pura-1280x716
Published on

ಬೆಂಗಳೂರು: ಕೆ.ಆರ್.ಪುರದಲ್ಲಿ ಗ್ಯಾಸ್ ಕಟ್ಟರ್‌ನಿಂದ ಎಟಿಎಂ ಯಂತ್ರ ಮುರಿದು ಹಣ ದೋಚಿದ್ದ ಪ್ರಕರಣದ ಇಬ್ಬರು ಅಂತಾರಾಜ್ಯ ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದ ಭರತ್‌ಪುರ ಜಿಲ್ಲೆಯ ಸಲೀಂ (27) ಮತ್ತು ಸಜೀದ್ (21) ಬಂಧಿತರು. ಆರೋಪಿಗಳಿಂದ 4 ಲಕ್ಷ ರೂ. ನಗದು, ಕಾರು ಹಾಗೂ ಗ್ಯಾಸ್ ಕಟ್ಟರ್ ಜಪ್ತಿ ಮಾಡಲಾಗಿದೆ. ತಲೆಮರೆಸಿಕೊಂಡಿರುವ ಮೂವರು ಪ್ರಮುಖ ಆರೋಪಿಗಳ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಐದು ಮಂದಿ ಆರೋಪಿಗಳು ರಾಜಸ್ಥಾನದಿಂದ ಕಾರಿನಲ್ಲಿ ನಗರಕ್ಕೆ ಬರುತ್ತಿದ್ದರು. ಕೆಲಸದ ನಿಮಿತ್ತ ಬಂದಿರುವುದಾಗಿ ಹೇಳಿಕೊಂಡು ಪರಿಚಯಸ್ಥರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರು. ಹಗಲು ಹೊತ್ತು ಗ್ರಾಹಕರ ಸೋಗಿನಲ್ಲಿ ಎಟಿಎಂ ಕೇಂದ್ರಗಳಿಗೆ ಹೋಗಿ ದರೋಡೆ ಮಾಡಲು ಸಂಚು ಮಾಡಿಕೊಳ್ಳುತ್ತಿದ್ದರು. ಸೆ. 30ರಂದು ಮಧ್ಯಾಹ್ನ ಭಟ್ಟರಹಳ್ಳಿಯ ಬಸವಪುರ ಮುಖ್ಯರಸ್ತೆಯಲ್ಲಿನ ಎಟಿಎಂ ಕೇಂದ್ರವನ್ನು ಪರಿಶೀಲಿಸಿಕೊಂಡಿದ್ದರು. ಸಿಸಿ ಕ್ಯಾಮರಾ ಹಾಗೂ ಭದ್ರತಾ ಸಿಬ್ಬಂದಿ ಇಲ್ಲದಿರುವುದು ಗೊತ್ತಾಗಿತ್ತು. ತಡರಾತ್ರಿ ಕಾರಿನಲ್ಲಿ ಹೋಗಿ ಗ್ಯಾಸ್ ಕಟ್ಟರ್‌ನಿಂದ ಯಂತ್ರವನ್ನು ಮುರಿದು, 11.44 ಲಕ್ಷ ರೂ. ದರೋಡೆ ಮಾಡಿ ಪರಾರಿಯಾಗಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಎರಡು ಪ್ರತ್ಯೇಕ ತಂಡಗಳಲ್ಲಿ ತನಿಖೆ ಕೈಗೊಳ್ಳಲಾಗಿತ್ತು.

ಎಟಿಎಂ ಕೇಂದ್ರದ ಸುತ್ತಮುತ್ತಲಿನ ರಸ್ತೆಗಳಲ್ಲಿನ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ ಆರೋಪಿಗಳು ಕೃತ್ಯಕ್ಕೆ ತಂದಿದ್ದ ಕಾರಿನ ಸುಳಿವು ಸಿಕ್ಕಿತ್ತು. ಐವರು ಆರೋಪಿಗಳ ಪೈಕಿ ಮೂವರು ಆರೋಪಿಗಳು ವಿಮಾನದಲ್ಲಿ ದೆಹಲಿಗೆ ಹೋಗಿದ್ದರು. ಇನ್ನಿಬ್ಬರು ಕಾರಿನಲ್ಲಿ ಪರಾರಿಯಾಗಿರುವುದು ಗೊತ್ತಾಗಿತ್ತು. ಕಾರಿನ ನಂಬರ್ ಆಧರಿಸಿ ಆರೋಪಿಗಳ ಪತ್ತೆಗೆ ದೆಹಲಿ, ಹರಿಯಾಣ, ರಾಜಸ್ತಾನದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಇಬ್ಬರು ಆರೋಪಿಗಳು ಭರತ್‌ಪುರದಲ್ಲಿ ಸಿಕ್ಕಿ ಬಿದ್ದಿದ್ದಾರೆ. ಆರೋಪಿಗಳು ಇದೇರೀತಿ ಕಲಬುರಗಿ, ನೆಲಮಂಗಲ ಸೇರಿದಂತೆ ರಾಜ್ಯದ ಹಲವೆಡೆ ಕೃತ್ಯ ಎಸಗಿರುವ ಮಾಹಿತಿ ಇದೆ. ಅಲ್ಲದೇ, ಬೇರೆ ರಾಜ್ಯಗಳಲ್ಲಿಯೂ ದರೋಡೆ ಮಾಡಿದ್ದರು ಎಂಬುದು ವಿಚಾರಣೆಯಿಂದ ಗೊತ್ತಾಗಿದೆ. ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಗಳು ಪತ್ತೆಯಾದ ಬಳಿಕ ಮತ್ತಷ್ಟು ಮಾಹಿತಿ ಸಿಗಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net