

ನರೇಗಲ್ಲ: ಲೋಕ ಕಲ್ಯಾಣಕ್ಕಾಗಿ ಸೂಡಿಯ ಶ್ರೀ ಚಿದಂಬರೇಶ್ವರ ದೇವಸ್ಥಾನದಲ್ಲಿ ನ.28ರಿಂದ ಡಿ. 2ರವರೆಗೆ ಅತಿರುದ್ರ ಮಹಾಯಾಗ ಆಯೋಜಿಸಾಗಿದೆ ಎಂದು ಚಿದಂಬರೇಶ್ವರ ದೇವಸ್ಥಾನದ ವೇ. ಬ್ರ. ಶ್ರೀ ಭುಜಂಗ ಶರ್ಮಾ ಜೋಷಿ ನರೇಗಲ್ಲ ತಿಳಿಸಿದ್ದಾರೆ.
ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಶ್ರೀ ಚಿದಂಬರ ಜಯಂತ್ಯುತ್ಸವ ಕುರಿತು ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಮಂತ್ರಗಳಲ್ಲಿ ದಿವ್ಯ ಶಕ್ತಿ ಇದೆ. ಇದು ವೈಜ್ಞಾನಿಕವಾಗಿಯೂ ದೃಢಪಟ್ಟಿವೆ. ಮಂತ್ರಗಳನ್ನು ಪಠಿಸುವುದರಿಂದ, ಕೇಳುವುದರಿಂದ ದೇಹದಲ್ಲಿ ಧನಾತ್ಮಕ ಶಕ್ತಿಯ ಸಂಚಯವಾಗುತ್ತದೆ. ಭಗವಂತನ ಕೃಪೆ, ಭಕ್ತರ ಸಹಕಾರದಿಂದ ಇಂತಹ ಮಹತ್ತರ ಕಾರ್ಯಗಳು ನೆರವೇರಲು ಸಾಧ್ಯವಿದೆ ಎಂದರು.
150 ಋತ್ವಿಜರು ಐದು ದಿನಗಳ ಕಾಲ ರುದ್ರ ಪಠಣ ಮಾಡುವರು. ಹುಬ್ಬಳ್ಳಿ, ಧಾರವಾಡ, ಹಾವೇರಿ, ಶ್ರೀಕ್ಷೇತ್ರ ಅಗಡಿ ಆನಂದವನ, ಉಡುಪಿ ಮತ್ತು ಬೆಂಗಳೂರಿನಿಂದ ಋತ್ವಿಜರು ಆಗಮಿಸುವರು.
ಅಧ್ಯಕ್ಷತೆ ವಹಿಸಿದ್ದ ವೇ.ಬ್ರ. ಶ್ರೀ ಗಣಪತಿಭಟ್ಟ ಜೋಷಿ ಮಾತನಾಡಿ, ಸೂಡಿಯ ಶ್ರೀ ಚಿದಂಬರೇಶ್ವರ ಕ್ಷೇತ್ರದಲ್ಲಿ ದಿಗಂಬರ ಮತ್ತು ಚಿದಂಬರರ ಸೇವೆ ನಡೆಯುತ್ತದೆ. ಏಕೆಂದರೆ ಅವರಿಬ್ಬರೂ ಒಂದೇ ನಾಣ್ಯದ ಎರಡು ಮುಖಗಳು. ಭಕ್ತಿ, ಯುಕ್ತಿ, ಮುಕ್ತಿ ಸಹಿತ ಭಗವಂತನ ಸೇವೆ ಮಾಡಿದರೆ ಖಂಡಿತ ಭಗವಂತನ ಒಲುಮೆ ಪ್ರಾಪ್ತವಾಗುತ್ತದೆ. ಡಿಸೆಂಬರ್ 3ರಂದು ಶ್ರೀಚಿದಂಬರೇಶ್ವರ ಮಹಾಸ್ವಾಮಿಯ ಜಯಂತ್ಯುತ್ಸವ ಇದ್ದು ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರು ಪಾಲ್ಗೊಳ್ಳಬೇಕು ಎಂದರು.
ರಘುನಾಥ ಕೊಂಡಿ, ರಾಜಶ್ರೀ ಕುಲಕರ್ಣಿ ಮಾತನಾಡಿದರು. ವೇ.ಮೂ. ವಿಶ್ವನಾಥಭಟ್ಟ ವೈದ್ಯ, ವಸಂತ ರಾಜಪುರೋಹಿತ, ಶ್ರೀವಲ್ಲಭಭಟ್ಟ ಸದರಜೋಷಿ, ಎಸ್.ಎಚ್. ಜೋಷಿ, ಬಿ.ಎಲ್. ಕುಲಕರ್ಣಿ, ಆನಂದ ಕಾಳೆ, ಗೋಪಾಲಭಟ್ಟ ಹಂದಿಗೋಳ, ವಿಶ್ವನಾಥಭಟ್ಟ ಗ್ರಾಮಪುರೋಹಿತ, ವೆಂಕಟೇಶ ಕುಲಕರ್ಣಿ, ಪ್ರಶಾಂತ ಗ್ರಾಮಪುರೋಹಿತ, ಆರ್.ಡಿ. ಕುಲಕರ್ಣಿ, ಮುಕುಂದಭಟ್ಟ ಸೂರ್ಯಭಟ್ಟನವರ, ಅರುಣ ಗ್ರಾಮಪುರೋಹಿತ, ಅಜಿತ ಕುಲಕರ್ಣಿ, ನಟರಾಜ ಜೋಷಿ, ಶಂಕ್ರಪ್ಪ ಕುಲಕರ್ಣಿ, ರಂಗನಾಥ ಕುಲಕರ್ಣಿ ಇತರರಿದ್ದರು. ನಿವೃತ್ತ ಮುಖ್ಯ ಶಿಕ್ಷಕ ಅರುಣ ಬಿ. ಕುಲಕರ್ಣಿ ನಿರೂಪಿಸಿದರು.