

ಮೈಸೂರು: ಸಿದ್ಧಗಂಗಾ ಮಠದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ ತ್ರಿವಿಧ ದಾಸೋಹ, ಆದರ್ಶ ಎಲ್ಲರಿಗೂ ಮಾದರಿ ಎಂದು ನಗರಪಾಲಿಕೆ ಮಾಜಿ ಸದಸ್ಯ ಪ್ರದೀಪ್‌ಕುಮಾರ್ ಬಣ್ಣಿಸಿದರು.
ವಿವಿಧ ಸಂಘ- ಸಂಸ್ಥೆಗಳು ಹಾಗೂ ಜಯಶಂಕರ್ ಬದನಗುಪ್ಪೆ ಸ್ನೇಹ ಬಳಗದಿಂದ ಪತ್ರಕರ್ತರ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಡಾ.ಶಿವಕುಮಾರ ಸ್ವಾಮೀಜಿ ಸ್ಮರಣಾರ್ಥ ದಾಸೋಹ ದಿನ ಉದ್ಘಾಟಿಸಿ ಮಾತನಾಡಿದರು.
ಶ್ರೀಗಳು ಭೌತಿಕವಾಗಿ ಇಲ್ಲದಿದ್ದರೂ ಅವರು ಬಿಟ್ಟು ಹೋಗಿರುವ ಆದರ್ಶ ಸದಾ ನಮ್ಮೊಂದಿಗಿದೆ. ಸಮಾಜಕ್ಕೆ ಅವರ ಸೇವೆ ಅನನ್ಯವಾದುದು. ಲಕ್ಷಾಂತರ ಮಕ್ಕಳಿಗೆ ಅನ್ನ, ಅಕ್ಷರ, ವಸತಿ ನೀಡಿದ ಶ್ರೀಗಳ ಹುಟ್ಟುಹಬ್ಬದಂದು ದಾಸೋಹ ದಿನ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.
ಹೋಟೆಲ್ ಮಾಲೀಕ ಮಲ್ಲೇಶ್ ಅವರನ್ನು ಸನ್ಮಾನಿಸಲಾಯಿತು. ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಬಳಗದ ಅಧ್ಯಕ್ಷ ಜಯಶಂಕರ್ ಬದನಗುಪ್ಪೆ, ಪತ್ರಕರ್ತ ದೀಪಕ್ ಇತರರು ಇದ್ದರು.