

ಮೂಲ್ಕಿ: ಆಸ್ಟ್ರೇಲಿಯಾದ ಸಿಡ್ನಿ ಸ್ಪೋರ್ಟ್ ಕ್ಲಬ್ ಸಭಾಂಗಣದಲ್ಲಿ ತುಳು ಕೂಟ ಸಿಡ್ನಿ ಸಂಯೋಜನೆಯಲ್ಲಿ ಆಟಿಡೊಂಜಿ ದಿನ ನಡೆಯಿತು.
ಶೃತಿ, ಮೇಘನಾ, ರಂಜೀತಾ, ವೀಣಾ ಹಾಗೂ ಶ್ರೇಯಾ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ಸಂಪನ್ಮೂಲ ವ್ಯಕ್ತಿ ಸುರೇಶ್ ಪೂಂಜ ಆಟಿಯ ಮಹತ್ವ ವಿವರಿಸಿ, ತುಳು ಸಂಸ್ಕೃತಿಯನ್ನು ಉಳಿಸುವ ಬಗ್ಗೆ ಯುವಕರು ಹೆಚ್ಚಿನ ಮುತುವರ್ಜಿ ವಹಿಸಬೇಕು. ನಾವೆಲ್ಲರೂ ಉದ್ಯೋಗ ನಿಮಿತ್ತ ಹೊರರಾಷ್ಟ್ರ ದಲ್ಲಿದ್ದರೂ ತುಳು ಪರಂಪರೆ ಬಿಡಬಾರದು. ನಮ್ಮ ದೇಶದ ಸಂಸ್ಕೃತಿ ಸಂಸ್ಕಾರಗಳ ವೈಜ್ಞಾನಿಕ ಮಹತ್ವವನ್ನು ಮಕ್ಕಳಿಗೆ ತಿಳಿಸಬೇಕು ಎಂದರು.
ಸುಮಿತ್ ಪ್ರಭಾಕರ್ ಸಿಡ್ನಿ ಮಾತನಾಡಿ, ಬೆರಳೆಣಿಕೆಯ ಯುವಕರು ಸೇರಿಕೊಂಡು ತುಳುಕೂಟ ಪ್ರಾರಂಭಿಸಿ ಪ್ರಥಮ ಬಾರಿ ಆಟಿಡೊಂಜಿ ದಿನ ನಡೆಸಿದ್ದಾರೆ. ವಿವಿಧ ಕುಟುಂಬಗಳು ಆಟಿ ಖಾದ್ಯ ತಯಾರಿಸಿ ತಂದು ಒಂದೇ ಕುಟುಂಬದಂತೆ ಭಾಗವಹಿಸಿರುವುದು ಖುಷಿ ನೀಡಿದೆ ಎಂದರು.
ತುಳುನಾಡ ಖಾದ್ಯಗಳಾದ ಕುಡುಸಾರು, ಕುಡುಚಟ್ನಿ, ಸೇಮೆ, ಕೋರಿ ಸುಕ್ಕ, ಕೋರಿ ಗಸಿ, ಕಾಣೆ ಪುಳಿಮುಂಚಿ, ಪುಂಡಿ, ಸೇಮೆದಡ್ಯೆ, ಶಾವಿಗೆ ಹಾಲು ಸೇರಿ 14ಕ್ಕೂ ಅಧಿಕ ಭಕ್ಷ್ಯ ಭೋಜನ ಉಣಬಡಿಸಲಾಯಿತು. ಆಟೋಟ ಸ್ಪರ್ಧೆಗಳು ನಡೆದವು. ಅಕ್ಷತಾ ಪ್ರಾರ್ಥಿಸಿದರು. ಅವಕಾಶ್ ವಂದಿಸಿದರು.