ಮೂಡುಬಿದಿರೆ ಬಿಲ್ಲವ ಸಂಘದಲ್ಲಿ ಆಟಿಡೊಂಜಿ ದಿನ

aati moodbidri
Published on

ಮೂಡುಬಿದಿರೆ: ಆಟಿ ತಿಂಗಳಲ್ಲಿ ತವರಿಗೆ ಬಂದ ಮನೆ ಮಗಳು, ತವರಿಗೆ ಹೋದ ಸೊಸೆ ತಂತಮ್ಮ ಕೂಡುಕುಟುಂಬದಲ್ಲಿ ಬೆರೆತು ವರ್ಷದ ಜೀವನದ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳುವ ಸಂದರ್ಭ ಒಂದು ಬಗೆಯಲ್ಲಿ ಕೌನ್ಸೆಲಿಂಗ್ ಆಗಿತ್ತು. ಆ ಹೊತ್ತು ಪ್ರಕೃತಿ ಸಂಪತ್ತಿನಲ್ಲಿ ಅಡಗಿದ ಆಹಾರ ಪದಾರ್ಥಗಳನ್ನು ಸೇವಿಸುವ ಮೂಲಕ ಕಷ್ಟದೆಡೆಯಲ್ಲೂ ಆರೋಗ್ಯ ಕಾಪಾಡಿಕೊಳ್ಳುವ ಪರಿಜ್ಞಾನ ನಮ್ಮ ಹಿರಿಯರಿಗಿತ್ತು ಎಂದು ಜಾನಪದ ವಿದ್ವಾಂಸ ಡಾ.ಗಣೇಶ ಅಮೀನ್ ಸಂಕಮಾರ್ ಹೇಳಿದರು.

ಮೂಡುಬಿದಿರೆಯಲ್ಲಿ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಶ್ರೀ ನಾರಾಯಣಗುರು ಸೇವಾದಳ ಮತ್ತು ಶ್ರೀ ನಾರಾಯಣಗುರು ಮಹಿಳಾ ಘಟಕ ಸಹಯೋಗದಲ್ಲಿ ಆಟಿಡೊಂಜಿ ದಿನ-2022 ಕಾರ್ಯಕ್ರಮದಲ್ಲಿ ‘ಆಟಿದ ಮದಿಪು’ ನೀಡಿದರು.

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಶಿರ್ತಾಡಿ ಶಾಖಾ ವ್ಯವಸ್ಥಾಪಕಿ ನಿಶ್ಮಿತಾ ಎಚ್. ಕಾರ್ಯಕ್ರಮ ಉದ್ಘಾಟಿಸಿದರು. ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸುರೇಶ್ ಕೆ. ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ಸನ್ಮಾನ: ನಾಟಿ ವೈದ್ಯೆ ಪಾಲಡ್ಕದ ಜಾನಕಿ ಪೂಜಾರಿ ಮತ್ತು ಯಕ್ಷಗಾನ ಹಾಗೂ ಲೀಫ್ ಆರ್ಟ್ ಕಲಾವಿದ ಮಂದಾರ ಮೂಡುಬಿದಿರೆ ಅವರನ್ನು ಸಮ್ಮಾನಿಸಲಾಯಿತು. ಆಟಿಡೊಂಜಿ ದಿನದಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಶಾಸಕ ಉಮಾನಾಥ ಕೋಟ್ಯಾನ್ ಬಹುಮಾನ ವಿತರಿಸಿದರು. ಡಾ.ರಮೇಶ್, ಗೆಜ್ಜೆಗಿರಿ ಶ್ರೀ ದೇಯಿ ಬೈದೇತಿ ಕೋಟಿ ಚೆನ್ನಯ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಪ್ರಧಾನ ಸಂಚಾಲಕ ನವೀನ್ ಸುವರ್ಣ, ಮಹಿಳಾ ಘಟಕದ ಗೌರವ ಸಲಹೆಗಾರೆ ಜಯಶೀಲ ಸುಂದರ ಸ್ವಾಗತಿಸಿದರು. ಸೇವಾದಳ ಮತ್ತು ಮಹಿಳಾ ಘಟಕಗಳ ಸಂಚಾಲಕ ರೋಹನ್ ಅತಿಕಾರಿಬೆಟ್ಟು ಪ್ರಸ್ತಾವನೆಗೈದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಘಟಕದ ಕಾರ್ಯದರ್ಶಿ ಸವಿತಾ ಜಿತೇಶ್ ವಂದಿಸಿದರು.

ಪದಗ್ರಹಣ: ಸೇವಾದಳದ ನೂತನ ಅಧ್ಯಕ್ಷ ಶ್ರೀರಾಜ್ ಎಸ್. ಸನಿಲ್ ಮತ್ತು ಮಹಿಳಾ ಘಟಕದ ನೂತನ ಅಧ್ಯಕ್ಷೆ ಸಾವಿತ್ರಿ ಕೇಶವ ಸಹಿತ ಎಲ್ಲ ನೂತನ ಪದಾಧಿಕಾರಿಗಳಿಗೆ ಜವಾಬ್ದಾರಿ ನೀಡಿ ಗೌರವಿಸಲಾಯಿತು. ಬೆಳ್ಳಾರೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಸಮಾಜದ ಯುವಕ ಪ್ರವೀಣ್ ಕುಮಾರ್ ನೆಟ್ಟಾರು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net