ಜು.೩೦ ರಂದು ಆಟಿಡೊಂಜಿ ದಿನ ಕೆಸರ್‌ದ ಗೊಬ್ಬು ಕಾರ್ಯಕ್ರಮ

WhatsApp Image 2023-07-09 at 4.56.32 PM
Published on

ಮಡಿಕೇರಿ: ಕೊಡಗು ಯುವ ಬಂಟ್ಸ್ ಅಸೋಸಿಯೇಷನ್ ಹೊಸ ಪ್ರಯತ್ನಕ್ಕೆ ಮುಂದಾಗಿದ್ದು, ಆಟಿಡೊಂಜಿ ದಿನ ಕೆಸರ್‌ದ ಗೊಬ್ಬು ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಯುವ ಬಂಟ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ವಸಂತ ರೈ ತಿಳಿಸಿದರು.


ಸಾಂಪ್ರದಾಯಿಕ ಗದ್ದೆಯ ಕೆಸರಿನಲ್ಲಿ ಎಲ್ಲರೂ ಮಿಂದೇಳಬೇಕೆಂಬ ಉದ್ದೇಶದಿಂದ ಮಹಿಳೆಯರು, ಪುರುಷರು, ಮಕ್ಕಳು, ಹಿರಿಯರಿಗೆ ಆಟೋಟಗಳನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಬಂಟರ ಸಂಘದ ಮಾರ್ಗದರ್ಶನದಲ್ಲಿ ನಗರ ಬಂಟರ ಮಹಿಳಾ ಸಂಘ, ಗಾಳಿಬೀಡು ಹೋಬಳಿ ಘಟಕದ ಸಹಯೋಗದಲ್ಲಿ ಜು.೩೦ರಂದು ಮಡಿಕೇರಿ ಹೊರವಲಯದಲ್ಲಿರುವ ಗಾಳಿಬೀಡುವಿನ ಹೊರಮಲೆ ಶಿವಪ್ರಸಾದ್ ರೈ ಎಂಬವರ ಗದ್ದೆಯಲ್ಲಿ ಕೆಸರುಗದ್ದೆ ಕ್ರೀಡಾಕೂಟ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಅಂದು ಬೆಳಗ್ಗೆ ೯.೩೦ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಗಾಳಿಬೀಡು ಘಟಕ ಅಧ್ಯಕ್ಷ ಸುಭಾಷ್ ಆಳ್ವ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕೃಷಿಕ ಹೊರಮಲೆ ಶಿವಪ್ರಸಾದ್ ರೈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಸಂಜೆ ೪ ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದೆ. ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಹಾಗೂ ಡಿಗ್ರಿಯಲ್ಲಿ ಶೇ.೮೫ಕ್ಕಿಂತ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಜಿಲ್ಲಾ ಬಂಟರ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಯುವ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ವಸಂತ ರೈ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಜಿಲ್ಲಾ ಬಂಟರ ಸಂಘದ ಗೌರವಾಧ್ಯಕ್ಷ ಬಿ.ಬಿ.ಐತಪ್ಪ ರೈ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.


ಅಸೋಸಿಯೇಷನ್ ಉಪಾಧ್ಯಕ್ಷ ಶರತ್ ಶೆಟ್ಟಿ ಮಾತನಾಡಿ, ಸಾಂಪ್ರದಾಯಿಕ ಜೀವನಶೈಲಿಯನ್ನು ಹೊಸ ತಲೆಮಾರಿಗೆ ಪರಿಚಯಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.


ಪುರುಷರಿಗೆ ಹ್ಯಾಂಡ್ ಬಾಲ್(೭+೨), ವಿವಿಧ ವಿಭಾಗದಲ್ಲಿ ೧೦೦ ಮೀಟರ್ ಓಟ, ಹಗ್ಗಜಗ್ಗಾಟ, ದಂಪತಿ ಓಟ, ಮಹಿಳೆಯರಿಗೆ ೧೦೦ ಮೀಟರ್ ಓಟ, ಹಗ್ಗಜಗ್ಗಾಟ, ನಿಂಬೆ ಚಮಚ, ಪಾಸಿಂಗ್ ಬಾಲ್, ಮಕ್ಕಳಿಗೆ ೧೦೦ ಮೀ. ಓಟ ಹಾಗೂ ಕೆಸರುಗದ್ದೆಯಲ್ಲಿ ವಿವಿಧ ಮನೋರಂಜನಾ ಸ್ಪರ್ಧೆ ಏರ್ಪಡಿಸಲಾಗಿದೆ. ಹ್ಯಾಂಡ್ ಬಾಲ್ ಸ್ಪರ್ಧೆಗೆ ಜು.೨೫ರೊಳಗೆ ತಂಡಗಳ ಹೆಸರು ನೋಂದಾಯಿಸಿಕೊಳ್ಳುವಂತೆ ತಿಳಿಸಿದರು.


ಎತ್ತಿನ ಮೂಲಕ ಉಳುಮೆ ಪ್ರಾತ್ಯಕ್ಷಿಕೆ, ಸಾಂಪ್ರದಾಯಿಕ ಕೃಷಿ ಪರಿಕರಗಳ ಪ್ರದರ್ಶನ, ನಗರ ಮಹಿಳಾ ಘಟಕದಿಂದ ಮಳೆಗಾಲದ ವಿಶೇಷ ಖಾದ್ಯಗಳ ಪ್ರದರ್ಶನ, ತುಳುನಾಡಿನ ಜಾನಪದ ನೃತ್ಯ ಆಟಿ ಕಳೆಂಜ ಪ್ರದರ್ಶನ, ಸಾಂಪ್ರದಾಯಿಕ ಅಲಂಕಾರದೊಂದಿಗಿನ ವಿಶೇಷ ವೇದಿಕೆ ಸೇರಿದಂತೆ ಹಲವು ವಿಶೇಷತೆಗಳೊಂದಿಗೆ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.


ಸುದ್ದಿಗೋಷ್ಟಿಯಲ್ಲಿ ಅಸೋಸಿಯೇಷನ್ ನಿರ್ದೇಶಕರಾದ ಸತೀಶ ರೈ.ಪಿ.ಕೆ., ರವಿಕಿರಣ್ ರೈ, ಸುರೇಶ್ ರೈ, ಗಾಳಿಬೀಡು ಕೃಷಿಕ ಶಿವಪ್ರಸಾದ್ ರೈ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net