

ಮಂಗಳೂರು: ಅಡ್ಯಾರ್‌ಪದವು ಹಿಂದು ಯುವಸೇವೆ ವೃಕ್ಷರಾಜ ಶಾಖೆ ಮತ್ತು ವೃಕ್ಷರಾಜ ಫ್ರೆಂಡ್ಸ್‌ಕ್ಲಬ್ ಗ್ರಾಮೀಣಾಭಿವೃದ್ಧಿ ಕೇಂದ್ರ ವತಿಯಿಂದ ಭಾನುವಾರ ವೃಕ್ಷರಾಜ ಸಭಾಭವನದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಜರುಗಿತು.
ಮುಖ್ಯ ಅತಿಥಿಯಾಗಿದ್ದ ಹಿಂದು ಯುವಸೇನೆ ಕೇಂದ್ರ ಸಮಿತಿ ಅಧ್ಯಕ್ಷ ಯಶೋಧರ ಚೌಟ ಮಾತನಾಡಿ, ಯುವಸಂಘಟನೆ ಎಲ್ಲಿ ಬಲವಾಗಿದೆಯೋ ಅಲ್ಲಿ ನಮ್ಮ ನೆಲದ ಸಂಸ್ಕೃತಿ ಗಟ್ಟಿಯಾಗಿ ಬೇರೂರಲು ಸಾಧ್ಯ. ದುಶ್ಚಟಗಳಿಂದ ದೂರವಿದ್ದು, ಒಳ್ಳೆಯ ಸುಸಂಸ್ಕೃತ ನಾಡನ್ನು ಕಟ್ಟೋಣ. ನಮ್ಮಿಂದಾದಷ್ಟು ಈ ಸಮಾಜದ ಋಣವನ್ನು ಸಲ್ಲಿಸೋಣ ಎಂದರು.
ವಿಶೇಷ ಉಪನ್ಯಾಸ ನೀಡಿದ ಪತ್ರಕರ್ತ ವಿಜಯ್ ಕೋಟ್ಯಾನ್ ಪಡು, ತುಳುನಾಡಿನ ಕಲೆ, ಆಹಾರ ಪದ್ಧತಿ, ಜಾನಪದ, ದೈವಾರಾಧನೆ ಸೇರಿದಂತೆ ಪ್ರತಿಯೊಂದು ಕ್ಷೇತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅವು ಬೆಲೆ ಕಟ್ಟಲಾಗದು. ಪ್ರತಿಯೊಂದು ಆಚರಣೆಗಳ ಹಿಂದೆ ವೈಜ್ಞಾನಿಕ ನಂಬಿಕೆಯಿದ್ದು ಆಹಾರ, ತಿನಸುಗಳಲ್ಲಿ ಆರೋಗ್ಯದ ಗುಟ್ಟು ಅಡಕವಾದೆ. ಹಿರಿಯರಿಂದ ಬಳುವಳಿಯಾಗಿ ಬಂದ ನಮ್ಮ ತುಳುನಾಡಿನ ಅಸ್ಮಿತೆಯನ್ನು ಮುಂದಿನ ಜನಾಂಗಕ್ಕೆ ತಿಳಿಸುವ ಕೆಲಸವಾಗಬೇಕಾಗಿದೆ ಎಂದರು.
ಅಕ್ಷಯ್ ಚೆಂಡೆ ತಂಡ ಅಡ್ಯಾರ್‌ಪದವು ಸಂಚಾಲಕ ನಾಮ್‌ದೇವ್ ಕೆಂಪುಗುಡ್ಡೆ, ಯುವ ಸಂಘಟಕ ನಿತೇಶ್ ಪೂಜಾರಿ ಅಡ್ಯಾರ್, ಹಿಂದೂ ಯುವಸೇನೆ ವೃಕ್ಷರಾಜ ಶಾಖೆಯ ಅಧ್ಯಕ್ಷ ಮನೋಜ್ ಪೂಜಾರಿ ಉಪಸ್ಥಿತರಿದ್ದರು.
ದಿನೇಶ್ ಅಡ್ಯಾರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ತಿಕ್ ಧನ್ಯವಾದ ಅರ್ಪಿಸಿದರು. ಸುಂದರಿ ದೇವುಪೂಂಜ ಪಾಡ್ದನ ಹೇಳಿದರು.